ರಾಷ್ಟ್ರೀಯ

ಭಾರತ ಜಪಾನ್ ಶೃಂಗಸಭೆ: ಪರಮಾಣು ಶಕ್ತಿ ಒಪ್ಪಂದಗಳಿಗೆ ಅಂಕಿತ; ರಕ್ಷಣೆ-ಬುಲೆಟ್ ಟ್ರೈನ್‌ಗಳಿಗೂ ಸಹಿ

Pinterest LinkedIn Tumblr

modi22

ಮುಂಬೈನಿಂದ ಅಹ್ಮದಾಬಾದ್‌ಗೆ ಮೂರೇ ಗಂಟೆಗಳ ಪ್ರಯಾಣ!
ಬುಲೆಟ್ ರೈಲಿಗೆ ಜಪಾನ್‌ನಿಂದ 12ಬಿ.ಡಾ.ಆರ್ಥಿಕ ನೆರವು
ಮುಂದಿನ ಮಾರ್ಚ್‌ನಿಂದ ಜಪಾನ್ ಪ್ರಜೆಗಳಿಗೆ ಆಗಮನ ವೀಸಾ ಸೌಲಭ್ಯ

ಹೊಸದಿಲ್ಲಿ, ಡಿ.12: 98,000 ಕೋ.ರೂ.ವೆಚ್ಚದ ಮುಂಬೈ-ಅಹ್ಮದಾಬಾದ್ ನಡುವೆ ದೇಶದ ಪ್ರಪ್ರಥಮ ಬುಲೆಟ್ ರೈಲು ಯೋಜನೆ ಹಾಗೂ ರಕ್ಷಣಾ ಮತ್ತು ಪರಮಾಣು ಶಕ್ತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಶನಿವಾರ ಅಂಕಿತಗಳನ್ನು ಹಾಕಿದವು.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ನಡುವಿನ ವಾರ್ಷಿಕ ಶೃಂಗಸಭೆಯ ಬಳಿಕ ಈ ವ್ಯೆಹಾತ್ಮಕ ಒಪ್ಪಂದಗಳಿಗೆ ಸಹಿಗಳನ್ನು ಹಾಕಲಾಯಿತು. ಮಾತುಕತೆಯ ವೇಳೆ ಉಭಯ ನಾಯಕರು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆ ಸೇರಿದಂತೆ ಪರಸ್ಪರ ಮಹತ್ವದ್ದಾದ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು.

ಅಬೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ಅಬೆಯವರನ್ನು ‘ಖಾಸಾ ಸ್ನೇಹಿತ ಮತ್ತು ಭಾರತ-ಜಪಾನ್ ಸಹಭಾಗಿತ್ವದ ಮಹಾನ್ ಪ್ರತಿಪಾದಕ’ ಎಂದು ಬಣ್ಣಿಸಿದರು.

ಉಭಯ ರಾಷ್ಟ್ರಗಳ ನಡುವೆ ಮೂಡಿ ಬಂದಿರುವ ಒಪ್ಪಂದಗಳನ್ನು ಪ್ರಸ್ತಾಪಿಸಿದ ಅವರು, ವೇಗ,ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗಾಗಿ ಖ್ಯಾತಿ ಪಡೆದಿರುವ ಶಿಂಕನ್ಸೆನ್ ಮೂಲಕ ಮುಂಬೈ-ಅಹ್ಮದಾಬಾದ್ ಮಾರ್ಗದಲ್ಲಿ ಬುಲೆಟ್ ರೈಲನ್ನು ಆರಂಭಿಸುವ ನಿರ್ಧಾರವು ಚಾರಿತ್ರಿಕವಾಗಿದೆ ಎಂದರು. ಈ ಯೋಜನೆಗಾಗಿ ಅತ್ಯಂತ ಸುಲಭ ಷರತ್ತುಗಳ ಮೇಲೆ ಸುಮಾರು 12 ಶತಕೋಟಿ ಡಾಲರ್ ಹಣಕಾಸು ಮತ್ತು ತಾಂತ್ರಿಕ ನೆರವನ್ನು ಒದಗಿಸುವ ಅಬೆಯವರ ಕೊಡುಗೆಯನ್ನು ಬಹುವಾಗಿ ಕೊಂಡಾಡಿದರು.

ನಾಗರಿಕ ಪರಮಾಣು ಶಕ್ತಿ ಸಹಕಾರ ಕುರಿತು ನಾವು ಸಹಿ ಮಾಡಿರುವ ತಿಳುವಳಿಕೆ ಪತ್ರವು ವಾಣಿಜ್ಯ ಮತ್ತು ಸ್ವಚ್ಛ ಶಕ್ತಿಗಾಗಿ ಒಪ್ಪಂದವೊಂದಕ್ಕಿಂತ ಮಿಗಿಲಾಗಿದೆ. ಅದು ಶಾಂತಿಯತ ಮತ್ತು ಸುರಕ್ಷಿತ ವಿಶ್ವ ನಿರ್ಮಾಣದ ನಿಟ್ಟಿನಲ್ಲಿ ಪರಸ್ಪರ ಆತ್ಮವಿಶ್ವಾಸ ಮತ್ತು ವ್ಯೆಹಾತ್ಮಕ ಸಹಭಾಗಿತ್ವದ ಹೊಸ ಎತ್ತರದ ಉಜ್ವಲ ಸಂಕೇತವಾಗಿದೆ ಎಂದು ಅವರು ಹೇಳಿದರು.

ಬುಲೆಟ್ ರೈಲು ಜಾಲವು ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಮೋದಿಯವರ ತವರು ರಾಜ್ಯ ಗುಜರಾತ್‌ನ ರಾಜಧಾನಿ ಅಹ್ಮದಾಬಾದ್‌ನೊಂದಿಗೆ ಸಂಪರ್ಕಿಸಲಿದೆ. ಈ ರೈಲಿನಿಂದಾಗಿ ಉಭಯ ನಗರಗಳ ನಡುವಿನ 505 ಕಿ.ಮೀ. ದೂರದ ಪ್ರಯಾಣ ಅವಧಿ ಎಂಟು ಗಂಟೆಗಳಿಂದ ಸುಮಾರು ಮೂರು ಗಂಟೆಗಳಿಗೆ ತಗ್ಗಲಿದೆ. ಯೋಜನೆಗೆ ಸುಮಾರು 98,000 ಕೋ.ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಹಾಗೂ ವರ್ಗೀಕೃತ ಮಿಲಿಟರಿ ಮಾಹಿತಿಗಳ ರಕ್ಷಣೆಗೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಒಪ್ಪಂದಗಳಿಗೂ ಉಭಯ ರಾಷ್ಟ್ರಗಳು ಸಹಿ ಹಾಕಿದವು.

ರಕ್ಷಣಾ ಒಪ್ಪಂದಗಳನ್ನು ‘ನಮ್ಮ ಭದ್ರತಾ ಸಹಕಾರದಲ್ಲಿ ನಿರ್ಣಾಯಕ ಹೆಜ್ಜೆಗಳು’ ಎಂದು ಬಣ್ಣಿಸಿದ ಮೋದಿ,ಅವು ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸಲಿವೆ ಮತ್ತು ಭಾರತದಲ್ಲಿ ರಕ್ಷಣಾ ತಯಾರಿಕೆಯನ್ನು ಉತ್ತೇಜಿಸಲಿವೆ ಎಂದು ಹೇಳಿದರು.

‘ಭಾರತ ಮತ್ತು ಜಪಾನ್ ದೂರದೃಷ್ಟಿ-2025’ ಕುರಿತು ಜಂಟಿ ಹೇಳಿಕೆಯೊಂದನ್ನು ಸಹ ಉಭಯ ನಾಯಕರು ಹೊರಡಿಸಿದರು. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರಕ್ಕಾಗಿ ಉಭಯ ಸರಕಾರಗಳು ಅಂತಿಮಗೊಳಿಸಿರುವ ಒಪ್ಪಂದವನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ತಾಂತ್ರಿಕ ವಿವರಗಳು ಅಂತಿಮಗೊಂಡ ನಂತರ ಒಪ್ಪಂದಕ್ಕೆ ಅಂಕಿತ ಬೀಳಲಿದೆ ಎನ್ನುವುದನ್ನು ಖಚಿತ ಪಡಿಸಿದರು ಎಂದು ಈ ಹೇಳಿಕೆಯು ತಿಳಿಸಿದೆ.

ಭಾರತವು ಮುಂದಿನ ವರ್ಷದ ಮಾರ್ಚ್ 1ರಿಂದ ಎಲ್ಲ ಜಪಾನ್ ಪ್ರಜೆಗಳಿಗೆ ಆಗಮನ ವೀಸಾ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಮಾತುಕತೆಗಳ ಬಳಿಕ ಮೋದಿ ಪ್ರಕಟಿಸಿದರು.

ನಾವು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇವೆ ಮತ್ತು ಮೊಗ್ಗುಗಳೀಗ ಸುಮಗಳಾಗಿ ಅರಳಿವೆ ಎಂದು ಅಬೆ ಹೇಳಿದರು.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರಕ್ಕೆ ಭಾರತದ ಸದಸ್ಯತ್ವವನ್ನು ಬೆಂಬಲಿಸಿದ್ದಕ್ಕಾಗಿ ಅಬೆಯವರಿಗೆ ಧನ್ಯವಾದಗಳನ್ನು ಸಲ್ಲಿಸಿದ ಮೋದಿ, ಸುಧಾರಿತ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಮ್ಮ ನ್ಯಾಯಯುತ ಸ್ಥಾನಕ್ಕಾಗಿ ಭಾರತವು ಹೋರಾಡಲಿದೆ ಎಂದರು.

ಭದ್ರತೆ,ಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಾಲಿ ಎದುರಾಗಿರುವ ಮತ್ತು ಎದುರಾಗಲಿರುವ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯವಾಗಿ ಮತ್ತು ಪಾಲುದಾರರೊಂದಿಗೆ ನಿಕಟ ಸಮನ್ವಯ ಮತ್ತು ಪರಿಣಾಮಕಾರಿ ಸಂವಹನದ ಅಗತ್ಯವನ್ನು ಉಭಯ ಪ್ರಧಾನಿಗಳು ಒತ್ತಿ ಹೇಳಿದರು ಎಂದು ಜಂಟಿ ಹೇಳಿಕೆಯು ತಿಳಿಸಿದೆ.

ಉತ್ತರ ಕೊರಿಯಾದ ವಿವಾದಾಸ್ಪದ ಪರಮಾಣು ಕಾರ್ಯಕ್ರಮ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ವಿಷಯಗಳನ್ನೂ ಉಭಯ ನಾಯಕರು ಚರ್ಚಿಸಿದರು.

Write A Comment