
ಮಂಗಳೂರು: ವಿಧಾನ ಪರಿಷತ್ ಚುನಾವಣೆಗೆ ದ.ಕ.ಜಿಲ್ಲೆಯಿಂದ ಈಗಾಗಲೇ ಮೂವರು ಕಾಂಗ್ರೆಸ್ ಪರವಾಗಿ ನಾಮಪತ್ರ ಸಲ್ಲಿಸಿದ್ದು, ಇದೀಗ ಕಾಂಗ್ರೆಸಿನಿಂದ ಮತ್ತೋರ್ವ ಅಭ್ಯರ್ಥಿ ಹರಿಕೃಷ್ಣ ಬಂಟ್ವಾಳ್ ಅವರು ಇಂದು ನಾಮಪತ್ರ ಸಲ್ಲಿಸುವ ಮೂಲಕ ಉಡುಪಿ ಮತ್ತು ದ.ಕ.ಜಿಲ್ಲೆಯ ಎರಡು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದಲೇ ಒಟ್ಟು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ. ಈ ಮೂಲಕ ಕಾಂಗ್ರೆಸಿನಲ್ಲಿ ಬಂಡಾಯದ ಬಿಸಿ ಮತ್ತಷ್ಟು ತೀವ್ರಗೊಂಡಿದೆ.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿಯವರು ಈಗಾಗಲೇ ಪಕ್ಷದ ಬಿ.ಫಾರ್ಮ್‌ನೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದಿಂದ ಟಿಕೆಟ್ ವಂಚಿತರಾದ ಜಯಪ್ರಕಾಶ್ ಹೆಗ್ಡೆ ಹಾಗೂ ಭುಜಂಗ ಶೆಟ್ಟಿ ಕೂಡ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದೀಗ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಮಂಗಳೂರಿನ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರು ಇಂದು ತಮ್ಮ ಭಾರೀ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸಿನಿಂದ ಒಟ್ಟು ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.

ಉಳಿದಂತೆ ಭಾರತೀಯ ಜನತಾ ಪಕ್ಷದ ವತಿಯಿಂದ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನಿಂದ ಪ್ರವೀಣ್ ಚಂದ್ರ ಜೈನ್, ಪಕ್ಷೇತರ ಅಭ್ಯರ್ಥಿಯಾಗಿ ಎ. ಎಮ್. ಇಸ್ಮಾಯಿಲ್ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಹರಿಕೃಷ್ಣ ಬಂಟ್ವಾಳ್ ಅವರು, ನಾನು ಕಾಂಗ್ರೆಸಿನ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯ ಕರ್ತರ ಪ್ರತಿನಿಧಿಯಾಗಿ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇನೆ. ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಆಗುತ್ತಿರುವ ಹಿನ್ನೆಲೆಯಲ್ಲಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಯಾವುದೇ ಕಾರಣಕ್ಕೂ ನಾನು ನಾಮಪತ್ರವನ್ನು ಹಿಂದಕ್ಕೆ ಪಡೆಯುವುದಿಲ್ಲ. ಹತ್ತು ಕೋಟಿ ರೂ. ಕೊಟ್ಟರೂ ನಾಮಪತ್ರ ಹಿಂಪಡೆಯುವುದಿಲ್ಲ. ಮುಖ್ಯಮಂತ್ರಿ ಸ್ಥಾನದ ಆಮಿಶವೊಡ್ಡಿದ್ದರೂ ನಾಮಪತ್ರ ಹಿಂಪಡೆಯುವ ಮಾತೇ ಇಲ್ಲ ಎಂದು ಗುಡುಗಿದರು.
ತನಗೆ ಸ್ವಾಮಿ ವಿವೇಕಾನಂದ, ನಾರಾಯಣಗುರು ಹಾಗೂ ಬಿ.ಜನಾರ್ದನ ಪೂಜಾರಿಯವರು ಪ್ರೇರಣೆ. ನಾನು 43 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. 1982ರಿಂದ ಪೂಜಾರಿ ಜೊತೆಗಿದ್ದೇನೆ. ಇಲ್ಲಿಯ ತನಕ ಕಾಂಗ್ರೆಸ್‌ನಿಂದ ಯಾವುದೇ ಹುದ್ದೆ ಪಡೆದಿಲ್ಲ, ಅರ್ಜಿಯೂ ನೀಡಿಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಕ್ರಿಯವಾಗಿ ದುಡಿಯುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್‌ನಿಂದ ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ ವಕ್ತಾರನಾಗಿ ಕೆಲಸ ನಿರ್ವಹಿಸಿದ್ದೇನೆ. ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ತನಗೆ ಟಿಕೆಟ್ ಬೇಡ ಎಂದು ಹೇಳಿದವರಿಗೆ ಟಿಕೆಟ್ ನೀಡಿದೆ ಎಂದು ದೂರಿದರು.
ನನ್ನಲ್ಲಿ ಹಣ ಇಲ್ಲ. ಆದರೆ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತರ ದಂಡೇ ನನ್ನ ಹಿಂದೆ ಇದೆ. ನಾನು ಅಧಿಕಾರಕ್ಕಾಗಿ ನಾಮ ಪತ್ರ ಸಲ್ಲಿಸಿಲ್ಲ. ತಾನು ಚುನಾವಣೆಯಲ್ಲಿ ಆಸೆಯಿಟ್ಟವನಲ್ಲ. ಅಧಿಕಾರವೂ ಬೇಡ. ಆದರೆ ನಿಷ್ಠಾವಂತ ಕಾರ್ಯಕರ್ತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಈ ರೀತಿಯ ಅನ್ಯಾಯ ನಡೆಯ ಬಾರದು. ಅದಕ್ಕಾಗಿ ತಾನು ಈ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ನಿರ್ಧಾರ ಕೈಗೊಂಡಿದ್ದೇನೆ. ಹಾಗಾಗಿ ಯಾವುದೇ ಕಾರಣಕ್ಕೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಅಹಿತಕರ ಘಟನೆಗಳು ಹೆಚ್ಚುತ್ತಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಶಿರಾಜ್ ಶೆಟ್ಟಿ ಕೊಳಂಬೆ, ಯುವ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ಅರುಣ್ ಕುವೆಲ್ಲೊ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜೊತೆಗಿದ್ದರು.