ರಾಷ್ಟ್ರೀಯ

ಅಮ್ಮನ ನಾಡಲ್ಲಿ ಅನ್ನಕ್ಕಾಗಿ ಹಾಹಾಕರ : ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ಜನ

Pinterest LinkedIn Tumblr

che

ಚೆನ್ನೈ, ಡಿ.5: ವರುಣನ ಆರ್ಭಟಕ್ಕೆ ತತ್ತರಿಸಿರುವ ತಮಿಳುನಾಡಿನಲ್ಲಿ ಅನ್ನದ ಹಾಹಾಕಾರ ಹೆಚ್ಚಾಗಿದೆ. ಅನ್ನ ಹಾಗೂ ಕುಡಿಯುವ ನೀರು ಸಿಗದೆ ಸಂತ್ರಸ್ತರು ತೀವ್ರ ಪರಿತಪಿಸುತ್ತಿದ್ದಾರೆ. ರಕ್ಷಣಾಪಡೆಯ ಸಿಬ್ಬಂದಿಗಳು ಸಂತ್ರಸ್ತರಿಗೆ ಅವಶ್ಯಕ ವಸ್ತುಗಳನ್ನು ತಲುಪಿಸುವಲ್ಲಿ ಹೆಣಗಾಡುತ್ತಿದ್ದಾರೆ. ಒಂದು ವಾರದಿಂದ ನೀರಿನಲ್ಲಿ ಮುಳುಗಿರುವ ಮನೆಗಳ ಮೇಲೆ ನಿಂತಿರುವವರು ಹೆಲಿಕಾಫ್ಟರ್‌ಗಳಿಂದ ಬರುವ ಆಹಾರ ಪಟ್ಟಣಕ್ಕಾಗಿ ಕಾತರಿಸುತ್ತಿದ್ದಾರೆ. ಕುಂಭದ್ರೋಣ ಮಳೆಯ ಜಲಪ್ರಳಯದಿಂದ ಮನೆಗಳಲ್ಲೇ ಬಂಧಿಯಾಗಿರುವ ಲಕ್ಷಾಂತರ ಜನರು ಕುಡಿಯುವ ನೀರು, ಹಾಲು, ಅಗತ್ಯ ವಸ್ತುಗಳಿಗಾಗಿ ಪರಿಪಾಟಲು ಪಡುತ್ತಿದ್ದಾರೆ. ಹಸಿವಿನಿಂದ ಕಂಗಾಲಾಗಿರುವ ಜನ ಆಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.

ಹೆಲಿಕಾಫ್ಟರ್‌ನ ಶಬ್ದವಾದರೆ ಸಾಕು ಆಕಾಶಕ್ಕೆ ಮುಖ ಮಾಡಿ ಏನಾದರೂ ಸಿಗುತ್ತದೆಯೇ ಎಂದು ನೋಡುವ ಪರಿಸ್ಥಿತಿ ಮುಂದುವರೆದಿದೆ. ಕೆಲವೆಡೆ ಜನರು ಬಾಳೆ ಹಣ್ಣು, ಟೊಮೊಟೊ ತಿಂದು ಹಸಿವನ್ನು ನಿವಾರಿಸಿಕೊಳ್ಳುತ್ತಿದ್ದಾರೆ.

ಮಳೆಯ ಹೊಡೆತಕ್ಕೆ ಈಗಾಗಲೇ ೩೦೦ ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಹದಗೆಟ್ಟಿರುವ ಪರಿಸ್ಥಿತಿ ಕಾಣಬರುತ್ತಿದ್ದು, ಇನ್ನೂ ಹಲವು ಭಾಗಗಳಲ್ಲಿ ಪ್ರವಾಹದ ತೀವ್ರತೆಯ ಪರಿಣಾಮಗಳ ನಿಖರ ಮಾಹಿತಿ ಲಭ್ಯವಾಗಿಲ್ಲ. ಲಕ್ಷಾಂತರ ಜನ ನಿರ್ವಸತಿಗರಾಗಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ತುತ್ತು ಅನ್ನಕ್ಕಾಗಿ ಆರ್ತನಾದ ಮಾಡುತ್ತಿರುವ ಪರಿಸ್ಥಿತಿ ಚೆನ್ನೈನ ಹಲವೆಡೆ ಕಂಡುಬಂದಿದೆ.

ಸಂತ್ರಸ್ತರಿಗೆ ನೆರವು ನೀಡಲಾರದಂತಹ ಪರಿಸ್ಥಿತಿ ಹಲವೆಡೆ ನಿರ್ಮಾಣವಾಗಿದೆ. ೨ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕಾಯಿಲೆಗೀಡಾದ ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಸೂಕ್ತ ಚಿಕಿತ್ಸೆ ದೊರೆಯದೆ ಹಲವರು ಮೃತಪಟ್ಟಿರುವುದು ವರದಿಯಾಗಿದೆ. ಇಂದು ಬೆಳಗ್ಗೆ ಮನೆಯ ಒಳಗಡೆ ಇರುವ ನೀರಿನಲ್ಲಿ ಮುಳುಗಿದ ವ್ಯಕ್ತಿಯೊಬ್ಬ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಚೆನ್ನೈನ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ತಗ್ಗಿನ ಪ್ರದೇಶ ಗುಡಿಸಲುವಾಸಿಗಳ ಪರಿಸ್ಥಿತಿ ಏನಾಗಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.ಚೆನ್ನೈ ಮಹಾನಗರದಲ್ಲಿರುವ ನೂರಾರು ಕೊಳಗೇರಿಗಳ ನಿವಾಸಿಗಳಿಗೆ ಅವಶ್ಯಕ ವಸ್ತುಗಳು ತಲುಪಿದೆಯೇ? ಅಲ್ಲಿನ ಪರಿಸ್ಥಿತಿ ಏನು? ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ.

ಎರಡು ವಾರದಿಂದ ಚೆನ್ನೈ ಮಹಾನಗರದ ಕಸ ಸರಬರಾಜಾಗದೆ ಅದರ ಮೇಲೆ ಮಳೆ ನೀರು ನಿಂತಿರುವುದು, ಒಳ ಚರಂಡಿಗಳ ನೀರೆಲ್ಲಾ ರಸ್ತೆಗೆ ಹರಿದಿರುವುದರಿಂದ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಿಗೆ ಧಾವಿಸುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ವಿದ್ಯುತ್ ಇಲ್ಲದೆ ಅಯೋಮಯವಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ಪ್ರತಿದಿನ ಚೆನ್ನೈಗೆ ಸುಮಾರು ೧೨ ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿತ್ತು. ಈಗ ೭ ಲಕ್ಷ ಲೀ. ಹಾಲು ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಉಳಿದ ಪ್ರದೇಶಗಳಿಗೆ ಹಾಲು ಪೂರೈಕೆ ಮಾಡಲಾಗುತ್ತಿಲ್ಲ. ಪೆಟ್ರೋಲ್ ಬಂಕ್‌ಗಳಿಗೂ ನೀರು ನುಗ್ಗಿದ ಪರಿಣಾಮ ಪೆಟ್ರೋಲ್, ಡೀಸೆಲ್ ಸಿಗುತ್ತಿಲ್ಲ. ಡೀಸೆಲ್ ಸಿಗದ ಹಿನ್ನೆಲೆಯಲ್ಲಿ ಜನರೇಟರ್‌ಗಳು ಕೆಲಸ ಮಾಡುತ್ತಿಲ್ಲ. ವಿದ್ಯುತ್ ಸ್ಥಗಿತದಿಂದ ಕಂಗಾಲಾಗಿರುವ ಜನತೆಗೆ ಡೀಸೆಲ್ ಕೊರತೆ ಗಾಯದ ಮೇಲೆ ಬರೆ ಎಳೆದಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಐದು ಪಟ್ಟು ಹೆಚ್ಚಳ ಮಾಡುತ್ತಿವೆ.

Write A Comment