ಮಂಗಳೂರು, ನ.25: ನಗರದ ಹಂಪನಕಟ್ಟೆಯ ಕೇಂದ್ರ ರೈಲು ನಿಲ್ದಾಣದಲ್ಲಿ ಅಪರಿಚಿತ ಯುವಕನೋರ್ವ ರೈಲಿಗೆ ಸಿಲುಕಿ ಮೃತ ಪಟ್ಟಿದ್ದಾನೆ.
ತಿರುವನಂತಪುರಕ್ಕೆ ಹೋಗುವ ಎಕ್ಸ್‍ಪ್ರೆಸ್ ರೈಲು ತೆರಳಿದ ಬಳಿಕ ರೈಲು ಹಳಿಯಲ್ಲಿ ಯುವಕನೋರ್ವನ ರಕ್ತಸಿಕ್ತ ಶವ ಕಂಡ ವ್ಯಕ್ತಿಯೋರ್ವರು ರೈಲ್ವೆ ಅಧಿ ಕಾರಿಗಳಿಗೆ ಮಾಹಿತಿ ನೀಡಿದ್ದರು. ರೈಲು ಯುವಕನ ಎದೆಯ ಮೇಲೆಯೇ ಹಾದು ಹೋಗಿದ್ದು, ರುಂಡ ಮುಂಡ ಬೇರ್ಪಟ್ಟಿದ್ದವು. ರೈಲ್ವೆ ಪೊಲೀಸರು ಶವವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
20ರ ಹರೆಯದ ಯುವಕ ಬಿಳಿ ಟಿ-ಶರ್ಟ್ ಮತ್ತು ಬರ್ಮುಡಾ ಧರಿಸಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಈತ ರೈಲು ಹತ್ತುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೋ ಅಥವಾ ಇದೊಂದು ಆತ್ಮಹತ್ಯೆ ಪ್ರಕರಣವೋ ಎನ್ನುವುದು ಇನ್ನಷ್ಟೇ ದೃಢಪಡಬೇಕಾಗಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
