ನವದೆಹಲಿ: ಬಿಹಾರ್‌ದಲ್ಲಿ ನಡೆಸಲಾದ ಪ್ರಯೋಗ ಯಶ ಪಡೆದ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಸಮಾನಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಆಸ್ಸಾಂಗಳಲ್ಲಿ ಚುನಾವಣೆಯನ್ನೆದುರಿಸುವ ಬಗ್ಗೆ ಪಕ್ಷದೊಳಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂಬುದನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿವೆ. ಕೇರಳದಲ್ಲಿ 6 ಪಕ್ಷಗಳ ಮೈತ್ರಿಕೂಟದಿಂದ ರಚಿತವಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಳ್ವಿಕೆ ನಡೆಸುತ್ತಿದೆ.
ಬಿಹಾರದಲ್ಲಿ ಲಾಲು ನೇತೃತ್ವದ ಆರ್‌ಜೆಡಿ, ಜೆಡಿ-ಯು ಮತ್ತು ಕಾಂಗ್ರೆಸ್ ಮಹಾಮೈತ್ರಿಕೂಟವನ್ನು ರಚಿಸಿಕೊಂಡು ಬಿಜೆಪಿ ವಿರುದ್ಧ ತೊಡೆ ತಟ್ಟಿದ್ದವು. ಜತೆಗೆ ಅಭೂತಪೂರ್ವ ಗೆಲುವನ್ನು ಸಹ ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೇರೆ ರಾಜ್ಯಗಳಲ್ಲೂ ಇದೇ ಪ್ರಯೋಗವನ್ನು ಮಾಡಲು ತಯಾರಾಗುತ್ತಿದೆ.