ಕೋಲ್ಕತಾ: ಹಲವು ರಾಜ್ಯಗಳಲ್ಲಿ ತಲೆನೋವಾಗಿರುವ ಎಡಪಂಥೀಯ ಪ್ರತ್ಯೇಕತಾವಾದಿಗಳಾದ ಮಾವೋವಾದಿಗಳ ವಿರುದ್ಧ ಸೇನಾಪಡೆಗಳನ್ನು ಬಳಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.
ದೇಶದ ಗಡಿಭಾಗಗಳಲ್ಲಿ ನೆರೆಹೊರೆಯ ರಾಷ್ಟ್ರಗಳಿಂದ ಬೆದರಿಕೆ ಎದುರಾದಾಗ ಅಥವಾ ದೇಶದ ಸಂವಿಧಾನವನ್ನು ವಿರೋಧಿಸುತ್ತಿರುವ ಪ್ರದೇಶಗಳಲ್ಲಿ ಸೇನಾಪಡೆಗಳನ್ನು ಬಳಸುವುದು ಸೂಕ್ತ. ಸಾಮಾಜಿಕ-ಆರ್ಥಿಕ ವಿಷಯಗಳನ್ನು ಎದುರಿಸುತ್ತಿರುವ ಮಾವೋವಾದಿಗಳ ವಿರುದ್ಧ ಸೇನಾಪಡೆಗಳನ್ನು ಬಳಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.
ಮಾವೋವಾದ ಸಾಮಾಜಿಕ-ಆರ್ಥಿಕ, ಮೂಲಸೌಕರ್ಯಗಳ ಕೊರತೆಯ ಸಮಸ್ಯೆ. ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳಿಂದ ಮಾವೋವಾದಿಗಳ ಸಮಸ್ಯೆಗಳನ್ನು ಈಡೇರಿಸಬಹುದಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ 2010ರಲ್ಲಿ ಮಾವೋವಾದಿಗಳು ದಂತೆವಾಡಾದಲ್ಲಿ 76 ಪೊಲೀಸರನ್ನು ಹತ್ಯೆ ಮಾಡಿದ್ದಾಗ, ಅಂದಿನ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಭೇಟಿ ಮಾಡಿದ್ದಾಗ, ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಗೆ ಸೇನಾಪಡೆಗಳನ್ನು ಬಳಸುವುದಕ್ಕೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿದ್ದೆ ಎಂದು ತಿಳಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇನಾಪಡೆಗಳ ಆಯೋಜನೆಗೆ ಯಾಕೆ ಅನುಮತಿ ನೀಡುತ್ತಿಲ್ಲ ಎಂದು ಅಂದಿನ ಗೃಹ ಸಚಿವ ಪಿ.ಚಿದಂಬರಂ ನನ್ನನ್ನು ಪ್ರಶ್ನಿಸಿದ್ದರು. ತಮ್ಮದೇ ದೇಶದ ಜನರ ವಿರುದ್ಧ ಗುಂಡುಹಾರಿಸುವುದು ಸೇನಾಪಡೆಗಳ ಉದ್ಯೋಗವಲ್ಲ ಎಂದು ನಾನು ಅವರ ಒತ್ತಡವನ್ನು ತಿರಸ್ಕರಿಸಿದ್ದೆ. ಅಂದಿನಿಂದ ಇವತ್ತಿನವರೆಗೂ ಚಿದಂಬರಂ ನನ್ನ ಜೊತೆ ವ್ಯವಹರಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.