ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನಡೆಸಿದ ರ್ಯಾಲಿಯಲ್ಲಿ ನಾವು ಪ್ರತೀ ಬಾರಿಯೂ ಬಿಹಾರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ಆದರೆ, ನಿತೀಶ್ ಕುಮಾರ್ ಅವರು ಮೋದಿ ಬಗ್ಗೆ ಮಾತ್ರ ಮಾತನಾಡುತ್ತಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಬಿರಾದ ಮೂರನೇ ಹಂತದ ಚುನಾವಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಬಿಹಾರ ಚಪ್ರಾದ ರ್ಯಾಲಿಯಲ್ಲಿ ಮಾತನಾಡಿರುವ ಅವರು. ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಬಿಹಾರ ರಾಜ್ಯದ ಯುವಕು ರಾಜ್ಯ ಬಿಟ್ಟು ಬೇರೆಡೆ ಹೋಗಲು ನಿತೀಶ್ ಕುಮಾರ್ ಹಾಗೂ ಲಾಲೂ ಪ್ರಸಾದ್ ಅವರೇ ಪ್ರಮುಖ ಕಾರಣರಾಗಿದ್ದಾರೆ.
ಚುನಾವಣೆ ವೇಳೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಒಂದೇ ಆಗಿತ್ತು. ಅದು ಅಭಿವೃದ್ಧಿ ಮಾತ್ರ. ಹಾಗಾಗಿಯೇ ನಾವು ಪ್ರಚಾರದ ವೇಳೆ ಅಭಿವೃದ್ಧಿ ಬಗ್ಗೆ ಮಾತನಾಡಿದ್ದು. ಆದರೆ, ಬಿಜೆಪಿ ವಿರೋಧಿ ಪಕ್ಷಗಳಾಗಿರುವ ರಾಷ್ಟ್ರೀಯ ಜನತಾ ದಳ, ಸಂಯುಕ್ತ ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪ್ರಚಾರದುದ್ದಕ್ಕೂ ಮೋದಿ…ಮೋದಿ…ಮೋದಿ…ಎಂದು ಹೇಳುತ್ತಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ ಬಿಹಾರ ಜನತೆ ಸಾಕಷ್ಟು ಭರವಸೆಗಳನ್ನು ನೀಡಿರುವ ಅವರು, ಇದೀಗ ನಮ್ಮ ಸರ್ಕಾರ ಬಿಹಾರ ರಾಜ್ಯಕ್ಕಾಗಿ ಮೂರು ಅಂಶಗಳ ಕಾರ್ಯಕ್ರಮವೊಂದನ್ನು ರೂಪಿಸಲು ಚಿಂತನೆ ನಡೆಸಿದ್ದು, ನೀರು, ವಿದ್ಯುತ್ ಹಾಗೂ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಇದಲ್ಲದೆ, ಯುವಕರಿಗೆ ವಿದ್ಯೆ, ಯುವಕರಿಗೆ ಉದ್ಯೋಗ ಹಾಗೂ ವೃದ್ಧರಿಗೆ ವೈದ್ಯಕೀಯ ಸೌಲಭ್ಯ, ಆರೋಗ್ಯ ಚಿಕಿತ್ಸೆಯಂತಹ ಯೋಜನೆಗಳಿಗೂ ಚಿಂತನೆ ನಡೆಸಲಾಗಿದೆ.
ಒಂದು ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆದ್ದು ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಿಹಾರ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಹೇಳಿದ್ದಾರೆ.