ಮಂಗಳೂರು, ಅ.25: ಓಲಾ ಆನ್‌ಲೈನ್ ಟ್ಯಾಕ್ಸಿ ಸಂಸ್ಥೆಯು ಮೂಲ ಒಪ್ಪಂದದ ಪ್ರಕಾರ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ಓಲಾ ಸಂಸ್ಥೆಯಡಿಯಲ್ಲಿ ಒಪ್ಪಂದದ ಪ್ರಕಾರ ದುಡಿಯುತ್ತಿರುವ ಟ್ಯಾಕ್ಸಿ ಚಾಲಕರು ಶನಿವಾರ ಪಿವಿಎಸ್ ಬಳಿಯಿರುವ ಓಲಾ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದ. ಕ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ ಓಲಾ ಸಂಸ್ಥೆಯು ನಗರದಲ್ಲಿ ಸೇವೆ ಆರಂಭಿಸುವ ಸಂದರ್ಭದಲ್ಲಿ ಮಾಡಿರುವ ಒಪ್ಪಂದದ ಪ್ರಕಾರ ಮಿನಿ ಟ್ಯಾಕ್ಸಿಗೆ ನಿಗದಿತ 3,000 ಕಿ.ಮೀ.ಗೆ 32,000 ರೂ. ಹಾಗೂ ಸೆಡನ್ ವಾಹನಕ್ಕೆ 3,000 ಕಿ. ಮೀ.ಗೆ 36,000 ರೂ. ನೀಡಬೇಕು ಎಂದಿದೆ.
ಆರಂಭದಲ್ಲಿ ಆಮಿಷ ತೋರಿಸಿದ ಸಂಸ್ಥೆ ನಂತರ ಹಿಂದಿನ ಒಪ್ಪಂದ ಕೈಬಿಟ್ಟಿದೆ. ಇದರಿಂದ ಟ್ಯಾಕ್ಸಿ ಚಾಲಕರು ಬೀದಿಗೆ ಬರುವಂತಾಗಿದೆ. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಕಾರನ್ನು ಖರೀದಿಸಿದವರಿಗೆ ಬ್ಯಾಂಕ್ ಸಾಲದ ಕಂತು ಪಾವತಿಸಲು ಅಸಾಧ್ಯವಾಗಿದೆ. ಚಾಲಕರು ಸಾಮೂಹಿಕ ನೇಣು ಹಾಕಿಕೊಳ್ಳುವಂತಹ ಪರಿಸ್ಥಿತಿ ಬಂದಿದ್ದು ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದ. ಕ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ದೇವದಾಸ್ ಸುವರ್ಣ, ಪ್ರ. ಕಾರ್ಯದರ್ಶಿ ಸಾದಿಕ್ ಕಣ್ಣೂರು, ಖಜಾಂಚಿ ಅರವಿಂದ್ ಮುಂತಾದವರು ಉಪಸ್ಥಿತರಿದ್ದರು.
ಮಾತುಕತೆ ವಿಫಲ: ದ.ಕ ಜಿಲ್ಲಾ ಅನ್‌ಲೈನ್ ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಟ್ಯಾಕ್ಸಿ ಚಾಲಕರು ಓಲಾ ಗ್ರಾಹಕರಿಗೆ ಸೇವೆ ನೀಡದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಸಂಘದ ಮುಖಂಡರುಗಳು ಓಲಾ ಸಂಸ್ಥೆಯ ಮಂಗಳೂರು ವಿಭಾಗದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ತಮ್ಮ ಬೇಡಿಕೆ ಈಡೇರದ ಪರಿಣಾಮ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಟ್ಯಾಕ್ಸಿ ಚಾಲಕರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಓಲಾ ಮಂಗಳೂರು ವಿಭಾಗದ ಸೂರಜ್ ಕರ್ಕೆರಾ, ಓಲಾದಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಪ್ಯಾಕೆಜ್ ಪರಿಚಯಿಸಲಾಗಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಆದಾಯದಲ್ಲಿ ಕಡಿಮೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ನಿಗದಿಪಡಿಸಿದ ಕನಿಷ್ಠ ಆದಾಯ ಸಿಗುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ. ಆದರೆ ಅವರು ಅದಕ್ಕೆ ಒಪ್ಪಿಲ್ಲ. ಅವರೊಂದಿಗೆ ಮಾಡಿದ ಕರಾರು ಅಗಸ್ಟ್ ತಿಂಗಳಲ್ಲಿ ಮುಕ್ತಾಯವಾಗಿದೆ. ಆ ಕರಾರಿನಂತೆ ಮುಂದುವರಿಯಲು ಅಸಾಧ್ಯವಾದುದರಿಂದ ಸಂಸ್ಥೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.


