ಬರೇಲಿ: ಉತ್ತರ ಪ್ರದೇಶದ ಸುನ್ನಿ ಮೌಲ್ವಿ ಮೌಲಾನಾ ತೌಕೀರ್ ರಾಜಾ, ಗೋಹತ್ಯೆ ನಿಷೇಧವಾಗಬೇಕೆಂದರೆ ಕಸಾಯಿಖಾನೆಗಳ ಮೇಲೆ ಮತ್ತು ಗೋಮಾಂಸ ರಫ್ತು ಮಾಡುವವರ ಮೇಲೆ ದಾಳಿ ಮಾಡಿ ಎಂದು ಕರೆ ಕೊಟ್ಟಿದ್ದಾರೆ.
ಗುರುವಾರ ಬರೇಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, “ನೀವು ಗೋಹತ್ಯೆಯನ್ನು ನಿಲ್ಲಿಸಬೇಕೆಂದು ಬಯಸಿದ್ದರೆ ವಧಾಗೃಹಗಳ ಮೇಲೆ ದಾಳಿ ಮಾಡಿ, ಜತೆಗೆ ಗೋಮಾಂಸವನ್ನು ರಫ್ತು ಮಾಡುವವರನ್ನು ಸಹ ಸುಮ್ಮನೆ ಬಿಡಬೇಡಿ. ನಿಮಗೆ ನನ್ನ ಬೆಂಬಲವಿದೆ. ಇದಕ್ಕಾಗಿ ನಾನು ಜೈಲಿಗೆ ಹೋದರು ಚಿಂತೆ ಇಲ್ಲ”, ಎಂದು ಹೇಳಿದ್ದಾರೆ.
ದೇಶದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಆಕಳ ಮಾರಾಟ ಮತ್ತು ಕೊಳ್ಳುವಿಕೆಯನ್ನು ನಿಷೇಧಿಸುವಂತೆ ಸಹ ಅವರು ಒತ್ತಾಯಿಸಿದ್ದಾರೆ. ಅಲ್ಲದೇ ದೇಶದಲ್ಲಿ ಗೋಮಾಂಸ ನಿಷೇಧ ವಿವಾದ ರಾಜಕೀಯ ತಿರುವು ಪಡೆದುಕೊಂಡಿರುವುದನ್ನು ವಿರೋಧಿಸಿ ಉತ್ತರ ಪ್ರದೇಶ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪ್ರಧಾನಿ ಮೋದಿಯವರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
“ಬೀಫ್ ನಿಷೇಧ ಮಾಡುವುದನ್ನು ಬಿಟ್ಟು ಕೇಂದ್ರ ರಫ್ತಿಗೆ ಪ್ರೋತ್ಸಾಹ ನೀಡುತ್ತಿದೆ. ಗೋಮಾಂಸ ರಫ್ತಿನಲ್ಲಿ ಮತ್ತೆ 20% ಹೆಚ್ಚಾಗಿದೆ”, ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
“ಆಕಳು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಹಿಂದೂಗಳು ಅದನ್ನು ಮಾರುತ್ತಾರೆ. ಇದು ಗೋ ಹತ್ಯೆಗೆ ಇಂಬು ನೀಡುತ್ತದೆ. ಆಕಳು ಮಾರುವವನು ಮತ್ತು ಕತ್ತರಿಸುವವನು ಇಬ್ಬರು ಸಹ ಈ ಅಪರಾಧದಲ್ಲಿ ಸಮಭಾಗಿಗಳು. ಆದ್ದರಿಂದ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಕಸಾಯಿಖಾನೆಗಳು ಮತ್ತು ಗೋಮಾಂಸ ರಫ್ತು ಕಾರ್ಖಾನೆಗಳು ಮುಸ್ಲಿಮೇತರರ ಅಥವಾ ಮುಸ್ಲಿಂರ ಜತೆ ಪಾಲುದಾರಿಕೆಯಲ್ಲಿ ನಡೆಸಲ್ಪಡುತ್ತವೆ”, ಎಂದು ಅವರು ಹೇಳಿದ್ದಾರೆ.
ಬಿಹಾರ್ ಚುನಾವಣೆಯ ಬಳಿಕ ನಾವು ಗೋ ಹತ್ಯೆ ಮತ್ತು ಗೋಮಾಂಸ ರಫ್ತು ನಿಷೇಧಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತೇವೆ ಎಂದು ಮೌಲ್ವಿ ಘೋಷಿಸಿದ್ದಾರೆ.