ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೇಳಿ ಬರುತ್ತಿರುವ ಆರೋಪಕ್ಕೆ ಕೇಂದ್ರ ಸರ್ಕಾರ ಇಂದು ಮೌನ ಮುರಿದು ಪ್ರತಿಕ್ರಿಯಿಸಿದೆ. ‘ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ, ಚರ್ಚೆಯಲ್ಲಿ ತೊಡಗಿಸಿಕೊಳ್ಳಿ, ವಿಧ್ವಂಸಕತೆಯಲ್ಲಲ್ಲ’, ಎಂದು ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮನವಿ ಮಾಡಿಕೊಂಡಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡುತ್ತಿದ್ದ ಜೇಟ್ಲಿ, ‘ಹಿಂಸಾ ಕೃತ್ಯಗಳು ಖಂಡನೀಯ, ಸಮರ್ಪಕವಾದುದನ್ನೇ ಚಿಂತಿಸುವ ವಿಭಾಗಗಳು ಇಂತಹವುಗಳಿಂದ ದೂರವಿರಬೇಕು’, ಎಂದು ಹೇಳಿದ್ದಾರೆ
ಇತ್ತೀಚಿನ ಕೆಲವಾರಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಸೇವನೆ ಮಾಡುವವರನ್ನು ಹತ್ಯೆಗೈಯ್ಯುತ್ತಿರುವ ಘಟನೆಗಳು ನಡೆಯುತ್ತಿವೆ. ಅಂಕಣಕಾರ ಸುಧೀಂದ್ರ ಕುಲಕರ್ಣಿ ಮತ್ತು ಜಮ್ಮು ಮತ್ತು ಕಾಶ್ಮೀರದ ಶಾಸಕ ರಶೀದ್ ಮುಖಕ್ಕೆ ಮಸಿ ಬಳಿಯಲಾಯಿತು. ಮೂವರು ಪ್ರಸಿದ್ಧ ವಿಚಾರವಾದಿಗಳು ಕೊಲೆಯಾಗಿದ್ದಾರೆ. ಈ ಕೃತ್ಯಗಳನ್ನು ವಿರೋಧಿಸಿ ದೇಶಾದ್ಯಂತ ಸುಮಾರು 40 ಲೇಖಕರು ತಮಗೆ ನೀಡಲಾಗಿದ್ದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.
‘ಇವುಗಳಲ್ಲಿ ಕೆಲವು ಅತೀ ಗಂಭೀರವಾದವುಗಳಾಗಿವೆ. ಮತ್ತೆ ಕೆಲವು ಅಂತರ್ ಸಮುದಾಯಗಳ ನಡುವಿರುವ ಸಂಬಂಧಗಳನ್ನು ಪ್ರತಿಫಲಿಸುತ್ತವೆ. ಕೆಲವು ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ಪ್ರದೇಶಗಳ ಕುರಿತು ಪ್ರತಿಬಿಂಬಿಸುತ್ತವೆ. ಜಾಪ್ರಭುತ್ವದಲ್ಲಿ ಜನರ ಮಧ್ಯೆ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಅದನ್ನು ಚರ್ಚೆ ಮೂಲಕ ಬಗೆ ಹರಿಸಿಕೊಳ್ಳಬೇಕು. ವಿನಃ ವಿಧ್ವಂಸಕ ಕೃತ್ಯದ ಮೂಲಕವಲ್ಲ. ಈ ಕುರಿತು ಉಚಿತ ಮತ್ತು ಸಭ್ಯ ರೀತಿಯಲ್ಲಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಬೇಕು’, ಎಂದು ಜೇಟ್ಲಿಯವರು ಹೇಳಿದ್ದಾರೆ.