ಮಂಗಳೂರು,ಅ.19 : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 80 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನದ 23 ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು. ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಖ್ಯಾತ ಮನೋವೈದ್ಯ ಡಾ. ಸತೀಶ್ ರಾವ್ ಹಾಗೂ ಖಾಸಗಿ ಬ್ಯಾಂಕ್ ಅಧಿಕಾರಿ ಶ್ರಿ ಅನಿರುದ್ಧ ನಾಯಕ್ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರದ ಶಿವಭಾಗ್ ಹಾಗೂ ಕದ್ರಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆ 7.30 ರಿಂದ ಸುಮಾರು ಮೂರು ಗಂಟೆಗಳ ಕಾಲ ಸ್ವಚ್ಛತಾಕಾರ್ಯ ನಡೆಯಿತು. ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಶ್ರೀ ದಿಲ್ರಾಜ್ ಆಳ್ವ ಸ್ವಚ್ಚತಾ ಕೈಂಕರ್ಯದ ಮುಂಚೂಣಿಯಲ್ಲಿದ್ದರು. ಕದ್ರಿಮಾರ್ಕೆಟ್, ಶಿವಭಾಗ್ ವೃತ್ತ ಹಾಗೂ ಮಲ್ಲಿಕಟ್ಟಾ ಸೇರುವ ರಸ್ತೆಗಳಲ್ಲಿ ಅಭಿಯಾನ ನಡೆಯಿತು.
ಶಿವಭಾಗ್ ಬಸ್ ತಂಗುದಾಣದ ನವೀಕರಣ ಹಾಗೂ ಆಸನಗಳ ವ್ಯವಸ್ಥೆ – ಪ್ರತಿನಿತ್ಯ ನೂರಾರು ಜನ ಉಪಯೋಗಿಸುವ ಶಿವಭಾಗ್ ವೃತ್ತದಲ್ಲಿರುವ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಗಳಿಲ್ಲದೆ ಮುಖ್ಯವಾಗಿ ವೃದ್ಧರು ಹಾಗೂ ಮಹಿಳೆಯರು ಪ್ರಯಾಣಿಕರು ಪರದಾಡುವಂತಾಗಿತ್ತು. ಇಂದು ಆ ತಂಗುದಾಣವನ್ನು ಶುಚಿಗೊಳಿಸಿ ಕುಳಿತುಕೊಳ್ಳಲು ಆಸನಹಾಕಿ, ರೇಲಿಂಗ್ಗಳಿಗೆ ನೀಲಿ ಬಣ್ಣ ಬಳಿದು, ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಅಲ್ಲದೇ ಅದರಲ್ಲಿ ಸ್ವಚ್ಚತೆಯ ಜಾಗೃತಿಯನ್ನುಂಟುಮಾಡುವ ಫಲಕವನ್ನೂ ಬರೆಯಲಾಗಿದೆ.
ಲೋಡ್ಗಟ್ಟಲೆ ಕಸ ಸಂಗ್ರಹ – ಅಲ್ಲಲ್ಲಿ ಬಿಸಾಡಲಾಗಿದ್ದ ಕಸದ ರಾಶಿಗಳನ್ನು ಜೆಸಿಬಿ, ಟಿಪ್ಪರ್ ಬಳಸಿ ಸ್ವಚ್ಛಗೊಳಿಸಲಾಗಿದೆ.. ಆಶ್ರಮದ ಭಕ್ತರಾದ ಶ್ರೀ ಕೆ ವಿ ಸತ್ಯನಾರಾಯಣ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸ್ವಯಂ ಸೇವಕರು ಕಸದ ರಾಶಿಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಸುಮಾರು ಎರಡು ಟಿಪ್ಪರ್ ಕಸ ಸಂಗ್ರಹಿಸಿ ಸಾಗಿಸಲಾಗಿದೆ.
ಕದ್ರಿ ಮಾರ್ಕೆಟ್ ಬಸ್ ತಂಗುದಾಣಗಳ ಶುಚಿತ್ವ: ಕದ್ರಿ ಮಾರ್ಕೆಟ್ ಬಸ್ ತಂಗುದಾಣದಲ್ಲಿದ್ದ ಕಸ ಕಲ್ಲು ಮಣ್ಣು ತೆಗೆದು ಶುಚಿಗೊಳಿಸಲಾಯಿತು. ಸಂಪೂರ್ಣವಾಗಿ ಶುಚಿಗೊಳಿಸಿ ಸುಣ್ಣ ಬಣ್ಣ ಬಳಿದು ಅಂದಗೊಳಿಸಲಾಗಿದೆ. ಅದೇ ಸಾಲಿನಲ್ಲಿರುವ ಇನ್ನೆರಡು ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಲಾಗಿದೆ.
ಜಾಗೃತಿ ಕಾರ್ಯ : ಸ್ವಚ್ಛತೆಯ ಜೊತೆಗೆ ಜಾಗೃತಿ ಕಾರ್ಯ! ಇದು ಸ್ವಚ್ಛ ಮಂಗಳೂರು ಅಭಿಯಾನದ ಬಹುಮುಖ್ಯ ಅಂಶವಾಗಿದೆ. ಅಂತೆಯೇ ಅಭಿಯಾನದದ ಸದಸ್ಯರು ಮಲ್ಲಿಕಟ್ಟ ಶಿವಭಾಗ್ ಕದ್ರಿ ಪರಿಸರದಲ್ಲಿರುವ ಮನೆಮನೆಗೆ ತೆರಳಿ ಸ್ವಚ್ಚ ಪರಿಸರ ಕುರಿತ ಕರಪತ್ರ ಹಂಚಿ ಜಾಗೃತಿ ಮಾಡಿದರು.
ಮಾರ್ಗಸೂಚಕ ಫಲಕಗಳ ನವೀಕರಣ : ಹಲವಾರು ವರುಷಗಳಿಂದ ನಿರ್ಲಕ್ಷಕ್ಕೊಳಗಾದ ಹಲವಾರು ಮಾರ್ಗಸೂಚಿ ಫಲಕಗಳು ನಗರದಲ್ಲಿ ಅಲ್ಲಲ್ಲಿ ಕಾಣಸಿಗುವುದು ಸಾಮಾನ್ಯ. ಸ್ವಚ್ಚ ಮಂಗಳೂರು ಅಭಿಯಾನದಲ್ಲಿ ಈ ಫಲಕಗಳನ್ನು ನವೀಕರಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಇಂದೂ ಸಹ ಎರಡು ಬೋರ್ಡಗಳನ್ನು ಹೊಸದಾಗಿ ಬರೆಸಲಾಗುತ್ತಿದೆ.
23 ನೇ ಅಭಿಯಾನದಲ್ಲಿ ಹಿರಿಯ ಕಾರ್ಯಕರ್ತರಾದ ಶ್ರೀವಿಠಲದಾಸ ಪ್ರಭು, ಶ್ರೀ ಜಯಕೃಷ್ಣ, ಶ್ರೀ ರಾಮಕುಮಾರ್ ಬೆಕಲ್, ಶ್ರೀ ಉಮಾನಾಥ ಕೋಟೆಕಾರ್, ಶ್ರೀ ಮುಖೇಶ್ ಆಳ್ವ. ಭಾಗವಹಿಸಿದ್ದರು. ಸ್ವಚ್ಛ ಮಂಗಳೂರು ಅಭಿಯಾನಕ್ಕೆ ನಿರಂತರ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕು. ಶ್ವೇತಾ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕಿಯವಾಗಿ ಪಾಲ್ಗೊಂಡರು. ರಾಮಕೃಷ್ಣ ಮಠದ ನಿವೇದಿತಾ ಬಳಗದ ಸದಸ್ಯರೂ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಹಾಪೋಷಕರಾಗಿ ಈ ಅಭಿಯಾನಕ್ಕೆ ಎಂಆರ್ಪಿಎಲ್ ಸಂಸ್ಥೆ ತನ್ನ ಸಹಕಾರ ನೀಡುತ್ತಿದೆ.
























