ನವದೆಹಲಿ: ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿದೆ. ಇದು ನಿಜಕ್ಕೂ ದೇಶಕ್ಕೆ ಅವಮಾನವಾಗುವ ವಿಚಾರ. ದೇಶಕ್ಕೆ ಈ ರೀತಿ ಅವಮಾನವಾಗುತ್ತಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯಪಾಲರು ಏನು ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರಶ್ನೆ ಮಾಡಿದ್ದಾರೆ.
ಇಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಕ್ಷಣೆ ನೀಡುವಲ್ಲಿ ದೆಹಲಿ ಪೊಲೀಸರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ದೇಶಕ್ಕೆ ಅವಮಾನವಾಗುವ ಈ ರೀತಿಯ ಪ್ರಕರಣಗಳು ದೆಹಲಿ ಹೆಚ್ಚುತ್ತಿದ್ದರೂ ದೇಶದ ಪ್ರಧಾನಿಯಾಗಿರುವ ಮೋದಿ ಹಾಗೂ ರಾಜ್ಯಪಾಲರು ಏನು ಮಾಡುತ್ತಿದ್ದಾರೆ ಎಂದು ಕೇಳಿದ್ದಾರೆ.
ನಿನ್ನೆಯಷ್ಟೇ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ನಿನ್ನೆ ಅಪಹರಿಸಿದ್ದ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಸ್ಥಳದಲ್ಲಿದ್ದ ಉದ್ಯಾನವನವೊಂದರಲ್ಲಿ ಬಿಟ್ಟು ಹೋಗಿದ್ದರು. ಅಸ್ವಸ್ಥಗೊಂಡಿದ್ದ ಮಗುವನ್ನು ಸ್ಥಳೀಯರು ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದರು. ಇದರಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿಯೂ ಐದು ವರ್ಷದ ಹೆಣ್ಣು ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ತಿಳಿದುಬಂದಿತ್ತು.
ಇದೀಗ ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.