ನವದೆಹಲಿ: ದೇಶಾದಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ದಾದ್ರಿಯ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ ಸಂಬಂಧ ವಿರೋಧ ಪಕ್ಷದ ನಾಯಕರು ಹಲವು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದರೂ ಈ ವರೆಗೂ ಮೌನವಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಮೊದಲ ಬಾರಿಗೆ ತಮ್ಮ ಮೌನವನ್ನು ಮುರಿದಿದ್ದು, ಹಿಂದೂ-ಮುಸಲ್ಮಾನರು ಸಾಮರಸ್ಯರಿಂದ ಬಾಳಿದರೆ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಹೇಳಿದ್ದಾರೆ.
ಈ ಕುರಿತಂತೆ ಬಿಹಾರ ರ್ಯಾಲಿಯಲ್ಲಿ ಮಾತನಾಡಿರುವ ಅವರು, ದೇಶದಲ್ಲಿರುವ ಜನತೆ ಒಬ್ಬರಿಗೊಬ್ಬರು ಸಾಮರಸ್ಯದಿಂದ ಬಾಳಬೇಕು. ಈ ಸಾಮರಸ್ಯವೇ ದೇಶವು ಅಭಿವೃದ್ಧಿ ಪಥದತ್ತ ಸಾಗಲು ಸಹಾಯವಾಗುತ್ತದೆ. ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜಕೀಯ ವ್ಯಕ್ತಿಗಳು ಅವರವರ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಮೊದಲು ಜನರು ವಿವಾದಾತ್ಮಕ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಡಬೇಕು.
ದಾದ್ರಿ ಪ್ರಕರಣ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಉತ್ತಮ ಸಂದೇಶವನ್ನು ನೀಡಿದ್ದರು. ದೇಶವು ಅವರ ಸಂದೇಶವನ್ನು ಪರಿಪಾಲಿಸುವ ಮೂಲಕ ಕಾರ್ಯನಿರ್ವಹಿಸಬೇಕಿದೆ. ನಾಯಕರೂ ಸಹ ಮೊದಲು ಗೋ ಹತ್ಯೆ ರಾಜಕಾರಣ ಹಾಗೂ ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಈ ರೀತಿಯ ಆರೋಪ-ಪ್ರತ್ಯಾರೋಪದಿಂದ ದೇಶದದಲ್ಲಿ ವಿಷಮ ಪರಿಸ್ಥಿತಿ ಎದುರಾಗುತ್ತದೆ, ನಾಯಕರು ವಿವಾದ ಸೃಷ್ಟಿಸುವ ಕೋಮುವಾದಿ ರಾಜಕಾರಣ ನಿಲ್ಲಿಸಿಬೇಕು. ದೇಶದ ಜನತೆ ಮೊದಲು ಇಲ್ಲಿರುವ ಬಡತನದ ಬಗ್ಗೆ ಹೋರಾಡಬೇಕೆ ವಿನಃ ಪರಸ್ಪರ ಅಲ್ಲ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ದಾದ್ರಿ ಪ್ರಕರಣ ಸಂಬಂಧ ವಿಷಾದ ವ್ಯಕ್ತಪಡಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಪ್ರಜಾಪ್ರಭುತ್ವಕ್ಕೆ ಅದರದ್ದೇ ಆದ ಗೌರವವಿದೆ. ಅದನ್ನು ಮನಸ್ಸಲ್ಲಿಟ್ಟುಕೊಂಡರೆ ನಾವು ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಬಹುದು. ಭಾರತದ ಸಂಸ್ಕೃತಿಗೆ ಧಕ್ಕೆ ತರುವಂಥಾ ಘಟನೆಗಳಿಗೆ ನಾವು ಆಸ್ಪದಕೊಡುವುದಿಲ್ಲ, ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆಯುವ ದೇಶ ನಮ್ಮದು. ನಾವು ಪರಸ್ಪರ ಸಹಕಾರ, ಸಾಮರಸ್ಯದಿಂದ ಬಾಳಿ ಬದುಕಬೇಕು ಎಂದು ಹೇಳಿದ್ದರು.