ಮಧುರೈ: ಚಲಿಸುತ್ತಿದ್ದ ಬಸ್ಸಿನ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಏಳು ತಿಂಗಳ ಹಸುಗೂಸು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ ಘಟನೆ ನಿನ್ನೆ ರಾತ್ರಿ ತಮಿಳುನಾಡಿನಲ್ಲಿ ನಡೆದಿದೆ.
ಬಸ್ಸಿನ ಮೆಟ್ಟಿಲುಗಳ ಪಕ್ಕದಲ್ಲಿ ಕೂತು ನಿದ್ದೆ ಮಾಡುತ್ತಿದ್ದ ಪೋಷಕರ ಕೈಯಲ್ಲಿ ಈ ಹಸುಗೂಸು ಇತ್ತು. ನಿದ್ರಾವಸ್ಥೆಗೆ ಜಾರಿದ್ದ ಪೋಷಕರ ಕೈಯಿಂದ ಈ ಕೂಸು ಕೆಳಗೆ ಬಿದ್ದಿದೆ. ಆದರೆ ಇದು ತಕ್ಷಣ ಪೋಷಕರ ಗಮನಕ್ಕೆ ಕಂಡುಬಂದಿಲ್ಲ. ಹಿಂದೆ ಬರುತ್ತಿದ್ದ ವ್ಯಾನ್ ಚಾಲಕನೊಬ್ಬ ಹಸುಗೂಸು ಕೆಳಕ್ಕೆ ಬಿದ್ದಿದ್ದನ್ನು ಗಮನಿಸಿದ್ದಾನೆ.
ತಕ್ಷಣ ಕೆಳಗೆ ಬಿದ್ದ ಮಗುವನ್ನು ವ್ಯಾನ್ ಚಾಲಕ ಆಸ್ಪತ್ರೆಗೆ ಸೇರಿಸಿದ್ದಾನೆ. ಅಲ್ಲದೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ನಿದ್ರೆಯಿಂದ ಎದ್ದ ಮಗುವಿನ ಪೋಷಕರು ಮಗು ತಮ್ಮ ಬಳಿ ಇಲ್ಲದಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣ ವಚಕರಂಪಟ್ಟಿ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾಗಿರುವ ಬಗ್ಗೆ ದೂರು ನೀಡಲು ತೆರಳಿದಾಗ ಮಗು ಆಸ್ಪತ್ರೆಯಲ್ಲಿರುವ ಸುದ್ದಿಯನ್ನು ಪೋಷಕರಿಗೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿದ್ದ ಮಗುವನ್ನು ಪೊಲೀಸರು ಪೋಷಕರ ವಶಕ್ಕೆ ನೀಡಿದ್ದಾರೆ.
