ಉಡುಪಿ: ಪರಿಸರ ಪ್ರೇಮದ ಬಗ್ಗೆ ಕರ್ನಾಟಕದ ಹೆಸರನ್ನು ಜಗದೆತ್ತರಕ್ಕೆ ಬೆಳಗಿಸಿದ ನಿಸರ್ಗದ ಪ್ರೀತಿಯ ಸಾಕಾರ ಮೂರ್ತಿ ಸಾಲುಮರದ ತಿಮ್ಮಕ್ಕ. ಇವರ ಹೆಸರನ್ನು ರಾಜ್ಯದಲ್ಲಿ ಕೇಳದವರು ಅತೀ ವಿರಳ. 41 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಬಂದಿವೆ. ಪ್ರಸ್ತುತ ರಾಜ್ಯ ಸರಕಾರ ಇವರನ್ನು ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಹೊರ ನೋಟಕ್ಕೆ ಪ್ರಸಿದ್ದಿ ಮತ್ತು ಸಾಕಷ್ಟು ಸರಕಾರಿ ಸವಲತ್ತುಗಳನ್ನು ಪಡೆದು ನೆಮ್ಮದಿಯಿಂದ ಇದ್ದಾರೆ ಎಂದು ಕಂಡರೂ ವಾಸ್ತವ ಮಾತ್ರ ಹಾಗಿಲ್ಲ. ಅವರು ಪಡುತ್ತಿರುವ ಪಾಡಿನ ಕುರಿತ ಡಿಟೈಲ್ಸ್ ಇಲ್ಲಿದೆ.
ಸರಕಾರ ನೀಡುತ್ತಿರುವ 500 ರೂಪಾಯಿ ವೃದ್ದಾಪ್ಯ ವೇತನ ಹೊರತು ಪಡಿಸಿ ಇವರಿಗೆ ಜೀವನ ನಿರ್ವಹಣೆಗೆ ಬೇರೆ ಯಾವುದೇ ಆರ್ಥಿಕ ಮೂಲಗಳಿಲ್ಲ. 105 ವರ್ಷದ ಈ ಅಜ್ಜಿಯ ಆರೋಗ್ಯವೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇವರ ಸಾಕುಮಗ ಉಮೇಶ್ ಅವರನ್ನು ಹೊರತುಪಡಿಸಿ ತಿಮ್ಮಕ್ಕನಿಗೆ ತನ್ನವರು ಎಂಬವರು ಯಾರೂ ಇಲ್ಲ. ವಯೋ ಸಹಜ ಆರೋಗ್ಯ ಸಮಸ್ಯೆಗಳು ಇವರನ್ನು ಕಾಡುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲೂ ಇವರು ಹೆಣಗಾಡುತ್ತಿದ್ದಾರೆ. ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚದಲ್ಲಿ 10 ಶೇಕಡಾ ರಿಯಾಯಿತಿ ಸಿಗುತ್ತಿರುವುದು ಹೊರತುಪಡಿಸಿ ಇವರಿಗೆ ಬೇರೆ ಯಾವುದೇ ನೆರವು ಲಭ್ಯವಿರುವುದಿಲ್ಲ. ಇವರ ಹುಟ್ಟೂರಾದ ಹುಲಿಕಲ್ ನಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇರದಿರುವ ಕಾರಣ ಸದ್ಯ ತಿಮ್ಮಕ್ಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಈ ಸಂದಿಗ್ದ ಪರಿಸ್ಥಿತಿಯನ್ನು ಮನಗಂಡು ಉಡುಪಿಯ ಒಂದಷ್ಟು ಪರಿಸರ ಮಿತ್ರರು ಸೇರಿ ಅಜ್ಜಿಗಾಗಿ ಒಂದು ತಾತ್ಕಾಲಿಕ ಪರಿಹಾರ ನಿಧಿಯನ್ನು ಸಂಗ್ರಹಿಸಬೇಕು ಎಂದು ನಿರ್ಧರಿಸಿದ್ದಾರೆ. ‘ನೆರಳು ನೆರವು’ ಎಂಬ ಈ ಅಭಿಯಾನದ ಪ್ರಯುಕ್ತ ಈಗಾಗಲೇ ಹಲವಾರು ಶಾಲಾ ಕಾಲೇಜುಗಳು ಮತ್ತು ಬ್ಯಾಂಕುಗಳ ಆವರಣದಲ್ಲಿ ಸಹಾಯನಿಧಿಗಾಗಿ ಹುಂಡಿಯನ್ನು ಇಡಲಾಗಿದೆ. ಅ.10 ರಂದು ಸಂಜೆ 4 ಗಂಟೆಗೆ ಸರಿಯಾಗಿ ಉಡುಪಿಯ ಬಿಗ್ ಬಜಾರ್ ಮುಂಭಾಗದಿಂದ ಈ ಪರಿಸರ ಮಿತ್ರರು ಜಾಥಾದ ಮೂಲಕ ಸಾರ್ವಜನಿಕರಿಂದ ತಿಮ್ಮಕ್ಕನಿಗಾಗಿ ನೆರವು ಯಾಚಿಸಲಿದ್ದಾರೆ. ಹಲವಾರು ಪರಿಸರ ಪ್ರೇಮಿಗಳು ಹಾಗೂ ತಿಮ್ಮಕ್ಕ ಅವರ ಸಾಕುಮಗ ಉಮೇಶ್ ಅವರು ಇವರೊಂದಿಗೆ ಭಾಗವಹಿಸಲಿದ್ದಾರೆ.
ಪರಿಸರ ಜಾಗೃತಿಯ ಜೊತೆಗೆ ತಿಮ್ಮಕ್ಕನಿಗೆ ನೆರವು ಒದಗಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರಿಂದ ಪೂರ್ಣ ಪ್ರಮಾಣದ ಸಹಕಾರವನ್ನು ನಿರೀಕ್ಷಿಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸ್ಪಂದಿಸಲು ಕೋರಲಾಗಿದೆ. ಉಡುಪಿಯಲ್ಲಿ ನಡೆದ ಈ ಪತ್ರಿಕಾಗೋಷ್ಠಿಯಲ್ಲಿ ಗುರುರಾಜ್ ಸನಿಲ್, ಅವಿನಾಶ್ ಕಾಮತ್, ಶ್ರೀಕಾಂತ ಶೆಟ್ಟಿ ಭಾಗವಹಿಸಿದ್ದರು.
ನೆರಳು ನೀಡಿದ ಅಜ್ಜಿಗೆ ನೆರವು ನೀಡಲು ಬಯಸಿದಲ್ಲಿ …………….
Saalumarada timmakka
A/c No: 1199101031844
Ifsc Code : CNRB0001199
Chikkabidarakkalu Branch


