ಆಗ್ರಾ, ಅ.5: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರವೇ ವಿಶ್ವವಿಖ್ಯಾತ ತಾಜ್ ಮಹಲ್‍ನಿಂದ ಆಗ್ರಾ ಕೋಟೆವರೆಗೆ ಸ್ಕೈವಾಕ್ ನಿರ್ಮಾಣವಾಗಲಿದೆ.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿದ್ದು, ಒಟ್ಟು 50 ಕೋಟಿ ರೂ. ಯೋಜನಾ ವೆಚ್ಚದ ಅಂದಾಜು ಮಾಡಲಾಗಿದೆ. ವಿಸ್ತøತ ಯೋಜನಾ ವರದಿ ತಯಾರಿಸುವ ಹೊಣೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಲಾಗಿದೆ. ಯೋಜನೆಯಡಿ ತಾಜ್ ಮಹಲ್ ಪಕ್ಕದಲ್ಲಿರುವ ಶಾಹಜಹಾನ್ ಉದ್ಯಾನವನದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಮತ್ತು ಮತ್ತೊಂದು ಕಡೆ ಸ್ಮಾರಕದೊಂದಿಗೆ ಆಗ್ರಾ ಕೋಟೆಯನ್ನು ಸಂಪರ್ಕಿಸಲಾಗುತ್ತದೆ.
“ಪಾದಚಾರಿ ಮಾರ್ಗವನ್ನು ಒಳಗೊಂಡ ಸ್ಕೈವಾಕ್ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ವಿಶ್ವಬ್ಯಾಂಕ್ ಸಹಭಾಗಿತ್ವ ವಹಿಸಲಿದೆ” ಎಂದು ನಿನ್ನೆ ಉತ್ತರ ಪ್ರದೇಶ ಪ್ರವಾಸೋದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಅಹ್ಮದಾಬಾದ್ ಮೂಲದ ಖಾಸಗಿ ಕಂಪನಿಯಾದ ಇಂಟರ್‍ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನೆಬಲ್ ಸಿಟೀಸ್‍ಗೆ ವಿಸ್ತøತ ಯೋಜನಾ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ತಾಜ್ ಮತ್ತು ಆಗ್ರಾ ಕೋಟೆ ಮಧ್ಯೆ ಇರುವ 2 ಕಿ.ಮೀ.ನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಮತ್ತು ಪ್ರವಾಸಿಗಳಿಗೆ ಅನುಕೂಲ ಮಾಡಿಕೊಡುವುದು ಈ ಸ್ಕೈವಾಕ್‍ನ ಉದ್ದೇಶವಾಗಿದೆ. ಆಗ್ರಾ ಕೋಟೆಯಿಂದ ತಾಜ್‍ಮಹಲ್‍ಗೆ ನಡೆದುಕೊಂಡು ಹೋಗುವವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಾಹ್ ಗಾರ್ಡನ್‍ನ ಸಮೀಪವಿರುವ ವಿಕ್ಟೋರಿಯಾ ಪಾರ್ಕ್ ಬಳಿ ಸ್ಕೈವಾಕ್ ನಿರ್ಮಾಣವಾಗಲಿದೆ. ಇದು ನೆಲದಿಂದ 25 ಅಡಿ ಎತ್ತರದಲ್ಲಿರಲಿದ್ದು, ಎಸ್ಕಲೇಟರ್ ಮತ್ತು ಮೆಟ್ಟಿಲುಗಳನ್ನು ಒಳಗೊಂಡಿರುತ್ತದೆ. ಅದರ ಎತ್ತರಕ್ಕೆ ಏರಿದಾಗ ಪ್ರವಾಸಿಗರಿಗೆ ಮತ್ತೊಂದು ದಿಕ್ಕಿಗೆ ಹೋಗಲು ಅನುಕೂಲವಾಗುತ್ತದೆ. ಈ ಯೋಜನೆ ಪರಿಸರಸ್ನೇಹಿಯಾಗಿರಲಿದ್ದು, ಮಾರ್ಗದಲ್ಲಿ ನೆರಳು ಇರಲಿದೆ. ಯೋಜನೆ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯದ ಅನುಭವ ನೀಡಲಿದೆ ಎಂದು ಅವರು ಹೇಳಿದ್ದಾರೆ.
