ವಾಷಿಂಗ್ಟನ್: ವಿಶ್ವದ ನಂಬರ್ ಒನ್ ವೆಬ್ಸೈಟ್ ಆಗಿರುವ ಗೂಗಲ್.ಕಾಂ ಕೇವಲ 782 ರೂ.(12 ಡಾಲರ್)ಗೆ ಮಾರಾಟವಾಗಿದೆ. ಮಾರಾಟವಾಗಿದ್ದು ಮಾತ್ರವಲ್ಲ ಇದು ಮಾರಾಟವಾಗಿದ್ದು ಭಾರತೀಯ ಮೂಲದ ವ್ಯಕ್ತಿಗೆ ಎನ್ನುವುದು ಮತ್ತೊಂದು ವಿಶೇಷ.
ಹೌದು. ಐಟಿ ದಿಗ್ಗಜ, ಬಹಕೋಟಿ ರೂ. ವ್ಯವಹಾರ ನಡೆಸುವ ಗೂಗಲ್ ಕಂಪೆನಿಯ ಗೂಗಲ್.ಕಾಂ ಡೊಮೈನ್ ಗೂಗಲ್ನಲ್ಲಿ ಕೆಲಸಕ್ಕಿದ್ದ ಮಾಜಿ ಉದ್ಯೋಗಿದ್ದ ಗುಜರಾತ್ ಮೂಲದ ಸನ್ಮಯ್ ವೇದ್ ಪ್ರಕಾಶ್ ಎಂಬವರಿಗೆ ಸಿಕ್ಕಿತ್ತು. ಆದರೆ ಡೊಮೈನ್ ಮಾಲೀಕರಾಗುವ ಅದೃಷ್ಟದ ಅವಧಿ ಇದ್ದದ್ದು ಒಂದು ನಿಮಿಷ ಮಾತ್ರ. ಒಂದು ನಿಮಿಷದ ಬಳಿಕ ಮತ್ತೆ ಗೂಗಲ್ ತನ್ನ ಡೊಮೈನ್ ಪಡೆದುಕೊಂಡಿತು.
ಸಿಕ್ಕಿದ್ದು ಹೇಗೆ? ಅಮೆರಿಕದಲ್ಲಿರುವ ಸನ್ಮಯ್ ವೇದ್ ಪ್ರಕಾಶ್ ಅವರು ಸೆ.29ರ ರಾತ್ರಿ 1.30ರ ವೇಳೆಗೆ ಡೊಮೈನ್ಗಾಗಿ ಗೂಗಲ್ ಸರ್ಚ್ ಎಂಜಿನ್ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಗೂಗಲ್ ಡೊಮೈನ್ ಮಾರಾಟಕ್ಕಿದೆ ಎನ್ನುವ ಫಲಿತಾಂಶ ಇವರಿಗೆ ಸಿಕ್ಕಿದೆ. ನೋಡಿದ ಕೂಡಲೇ ಯಾಕೆ ಈ ಡೊಮೈನ್ ಖರೀದಿಸಬಾರದು ಎಂದು ತೀರ್ಮಾನಿಸಿ ಒಂದು ಬಟನ್ ಒತ್ತಿಯೇ ಬಿಟ್ಟರು. ಕೂಡಲೇ ಡೊಮೈನ್ ಇವರಿಗೆ ಮಾರಾಟವಾಗಿತ್ತು.
ನಾನು ಗೂಗಲ್ನ ಮಾಜಿ ಉದ್ಯೋಗಿಯಾದ ಕಾರಣ ಆಗಾಗ ಗೂಗಲ್ ಉತ್ಪನ್ನಗಳ ಮೇಲೆ ಕಣ್ಣಾಡಿಸುತ್ತಲೇ ಇರುತ್ತೇನೆ. ಡೊಮೈನ್ಗಾಗಿ ಹುಡುಕಾಟ ನಡೆಸುವ ವೇಳೆ ಡೊಮೈನ್ ಮಾರಾಟಕ್ಕಿದೆ ಎನ್ನುವುದನ್ನು ನೋಡಿದ ಕೂಡಲೇ ನನಗೆ ಶಾಕ್ ಆಯ್ತು. ತಾಂತ್ರಿಕ ತೊಂದರೆಯಿಂದ ಈ ರೀತಿ ಆಗಿರಬಹುದು ಎಂದು ಭಾವಿಸಿದೆ. ಆದರೂ ಒಂದು ಪ್ರಯತ್ನ ಮಾಡಿ ಖರೀದಿಸಿದರೆ ಹೇಗೆ ಎಂದು ಭಾವಿಸಿ ಪ್ರಯತ್ನ ಮಾಡಿದೆ. ಗೂಗಲ್.ಕಾಂ ಡೊಮೈನ್ ಸಿಕ್ಕಿತು ಎಂದು ಸನ್ಮಯ್ ತಮ್ಮ ಅನುಭವವನ್ನು ಮಾಧ್ಯಮಗಳ ಜೊತೆ ಹೇಳಿಕೊಂಡಿದ್ದಾರೆ.
ಅದೃಷ್ಟ 1 ನಿಮಿಷ ಮಾತ್ರ: ವೇದ ಪ್ರಕಾಶ್ ಅವರಿಗೆ ಗೂಗಲ್ ಡೊಮೈನ್ ಮಾಲೀಕರಾಗುವ ಅದೃಷ್ಟ ಸಿಕ್ಕಿದ್ದು ಕೇವಲ ಒಂದು ನಿಮಿಷ ಮಾತ್ರ. ಡೊಮೈನ್ ಮಾರಾಟವಾಗಿರುವ ವಿಚಾರ ಕೂಡಲೇ ಗೂಗಲ್ನ ಭದ್ರತಾ ತಂಡಕ್ಕೆ ಗೊತ್ತಾಗಿ ಸನ್ಮಯ್ ಅವರಿಗೆ ಕರೆ ಮಾಡಿದ ಸಿಬ್ಬಂದಿ ನಿಮ್ಮ ಡೊಮೈನ್ ಖರೀದಿಯನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೂಡಲೇ 12 ಡಾಲರ್ ಹಣ ಇವರ ಖಾತೆಗೆ ವರ್ಗವಾಗಿದೆ. ಇದೀಗ ಗೂಗಲ್ ಈ ರೀತಿ ಡೊಮೈನ್ ಮಾರಾಟವಾಗಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆ ಆರಂಭಿಸಿದೆ.
