ಮಂಗಳೂರು / ಪಣಂಬೂರು : ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪಿದ್ದ ಘಟನೆ ರವಿವಾರ ಮುಂಜಾನೆ ಪಣಂಬೂರಿನ ಎಂಸಿಎಫ್ ಬಳಿ ಸಂಭವಿಸಿದೆ.
ಬಜ್ಪೆ ಅದ್ಯಪಾಡಿ ನಿವಾಸಿ ಗಿರೀಶ್ ಎಂಬವರೇ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಈ ಸಂದರ್ಭ ಕಾರಿನಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿರೀಶ್ ಅವರು ಇಂದು ಮುಂಜಾನೆ 4.30ರ ಸುಮಾರಿಗೆ ಬೊಲೆರೋ ಕಾರಿನಲ್ಲಿ ಮಂಗಳೂರಿಗೆ ಆಗಮಿಸುತ್ತಿದ್ದಾಗ ತಮ್ಮ ನಿಯಂತ್ರಣ ಕಳೆದುಕೊಂಡ ಕಾರು ಪಣಂಬೂರು ಎಂಸಿಎಫ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದು ಈ ದುರಂತ ಸಂಭವಿಸಿತ್ತು ಎನ್ನಲಾಗಿದೆ.
ಅಪಘಾತದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
—————————–
ಅಪಘಾತ : ಹೆಚ್ಚಿನ ವರದಿ (Updated News)
ಪಣಂಬೂರು ಎಂಸಿಎಫ್ ಮುಂಭಾಗ ನಿಂತಿದ್ದ ಲಾರಿಗೆ ಬೊಲೆರೋ ಜೀಪ್ ಢಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು ಮಹಿಳೆಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಮುಂಜಾನೆ 5.10ರ ಸುಮಾರಿಗೆ ಸಂಭವಿಸಿದೆ.
ಬಜಪೆ ಅದ್ಯಪಾಡಿ ನಿವಾಸಿ ಗಿರೀಶ್ (39) ಮೃತ ಯುವ ಉದ್ಯಮಿ. ಮಾಟೆಬೈಲು ನಿವಾಸಿ ಶಕುಂತಲಾ ಗಂಭೀರ ಗಾಯಗೊಂಡವರು.
ಉಡುಪಿ ಮಂಗಳೂರು ಹೆದ್ದಾರಿ 66ರಲ್ಲಿ ಮುಂಜಾನೆ ವೇಳೆ ತನ್ನ ಅದ್ಯಪಾಡಿಯ ಮನೆಗೆ ಹೋಗುತ್ತಿದ್ದಾಗ ಎಂಸಿಎಪ್ ರೈಲ್ವೇ ಮಾರ್ಗದ ಬಳಿ ನಿಯಂತ್ರಣ ತಪ್ಪಿದ ಜೀಪ್ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಜೀಪ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದ್ಯಪಾಡಿ ಪದವುಸೈಟ್ ನಿವಾಸಿ ಹೂವಪ್ಪ ಲೀಲಾ ದಂಪತಿಗೆ ಎರಡು ಗಂಡು, ಮೂವರು ಹೆಣ್ಣು ಮಕ್ಕಳಿದ್ದು, ಅಪಘಾತಕ್ಕೊಳಗಾಗಿ ಮೃತಪಟ್ಟ ಗಿರೀಶ್ ಮೊದಲ ಮಗ. ಕುಳಾಯಿಯಲ್ಲಿ ಇವರು ಅಜ್ಜಿ ಮನೆ ಹೊಂದಿದ್ದು, ಆದಿನಾಥೇಶ್ವರ ಕ್ರೈನ್ಸ್ ಎಂಬ ಸಂಸ್ಥೆಯ ಮಾಲಕರಾಗಿದ್ದು ಎಂಆರ್ಪಿಎಲ್, ಪಣಂಬೂರು ಮತ್ತಿತರೆಡೆ ಗುತ್ತಿಗೆ ಹೊಂದಿದ್ದರು.
ಶಕುಂತಲಾ ಆಚಾರಿ ಅವರು ಮಾಟೆಬೈಲ್ ನಿವಾಸಿ ಸುರೇಶ್ ಆಚಾರಿ ಪತ್ನಿ. ಅವರರಿಗೆ ಇಬ್ಬರು ಪುತ್ರರಿದ್ದಾರೆ. ಅವರು ಗಂಜಿಮಠದ ಐಟಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದು, ಶನಿವಾರ ಕೆಲಸ ಮುಗಿಸಿ ನೀರುಡೆಯಲ್ಲಿರುವ ತಾಯಿ ಮನೆಗೆ ಹೋಗುವುದಾಗಿ ತನ್ನ ಪತಿ ಹಾಗೂ ಪತಿಯ ಮನೆಗೆ ತಿಳಿಸಿದ್ದರು.
ಎಂಸಿಎಫ್ ಮುಂಭಾಗ ಹೆದ್ದಾರಿಯ ಎರಡೂ ಬದಿಗಳಲ್ಲಿ ನೀರು ನಿಲ್ಲುತ್ತಿದ್ದು ವಾಹನಗಳ ಗಾಜಿಗೆ ಸಿಂಚನವಾಗುತ್ತಿದೆ. ಅನಿರೀಕ್ಷಿತವಾಗಿ ಗಾಜಿಗೆ ನೀರು ಹಾರುವುದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತವಾಗುತ್ತಿದೆ. ಪೊಲೀಸ್ ವಾಹನ ಸಹಿತ ಇದೇ ಜಾಗದಲ್ಲಿ 6ಕ್ಕೂ ಮಿಕ್ಕಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿದೆ.ಇಷ್ಟಾದರೂ ಇಲಾಖೆ ಮಾತ್ರ ಹೆದ್ದಾರಿ ದೋಷವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲದಿರುವುದು ಸಾರ್ವಜನಿಕರಲ್ಲಿ ಅಕ್ರೋಶವನ್ನುಂಟುಮಾಡಿದೆ.
