ಹೊಸದಿಲ್ಲಿ, ಅ.2: ಸರಕಾರಿ ನೌಕರಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧರಿತ ಮೀಸಲು ಸೌಲಭ್ಯವನ್ನು ಪ್ರಶ್ನಿಸಿರುವ ನಮ್ಮ ಹೋರಾಟವನ್ನು ಹೈಜಾಕ್ ಮಾಡಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ ಎಂದು ಪಟೇಲ್ ಸಂಘಟನೆಯ ನಾಯಕ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.
ಪಟೇಲ್ ಸಮುದಾಯದವರು ಹೋರಾಟ ಆರಂಭಿಸಿದ ನಂತರ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಜಾತಿ ಮೀಸಲಾತಿ ನೀತಿಯ ಪರಾಮರ್ಶೆಗೆ ಕರೆ ನೀಡಿದ್ದಾರೆ.
ಮೀಸಲಾತಿಯನ್ನು ತೊಡೆದು ಹಾಕಲು ಆರೆಸ್ಸೆಸ್ ಕೂಡ ಉತ್ಸುಕವಾಗಿದೆ ಎಂಬುದನ್ನು ಅವರ ಹೇಳಿಕೆಗಳು ತೋರಿಸುತ್ತವೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.ಮೀಸಲಾತಿ ಕುರಿತಂತೆ ಯಾರೋ ಒಬ್ಬರು ಮಾತನಾಡಲು ತೊಡಗಿದಾಗ, ಅದರಲ್ಲಿ ಸೇರಿಕೊಳ್ಳಲು ಅವರು ಬಯಸಿದ್ದಾರೆ. ನಾವು ಆರಂಭಿಸಿರುವ ರೈಲಿಗೆ ಓಡಿ ಬಂದು ಹತ್ತಿಕೊಳ್ಳಲು ಭಾಗವತ್ ಪ್ರಯತ್ನಿಸುತ್ತಿದ್ದಾರೆ. ಭಾಗವತ್ ಯಾವಾಗಲೂ ಹೀಗೆ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಮೇಲ್ವರ್ಗದ ಜನರು ಯಾವಾಗಲೂ, ಎಲ್ಲವುಗಳಿಂದಲೂ ಉತ್ತಮವಾದುದನ್ನೇ ಗಳಿಸಿಕೊಳ್ಳುತ್ತಾರೆ. ಅವರು ನ್ಯಾಯಾಂಗವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಮತಬ್ಯಾಂಕಿನ ಕಾರಣದಿಂದ ಕೆಳವರ್ಗದವರೂ ಇದರಲ್ಲಿ ಪಾಲು ಪಡೆಯುತ್ತಾರೆ. ನಮ್ಮಂತಹ ಸಮುದಾಯಕ್ಕೆ ಏನು ಸಿಗಲಿದೆ? ಎಂದು ಅವರು ಪ್ರಶ್ನಿಸಿದ್ದಾರೆ.