ನವದೆಹಲಿ: ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಷಡ್ಯಂತ್ರ ರೂಪಿಸುತ್ತಿದೆ. ಪಂಜಾಬ್ನಲ್ಲಿ ಸಿಖ್ ಉಗ್ರಗಾಮಿಗಳಿಗೆ ವಿಶೇಷ ತರಬೇತಿ ನೀಡಿ ಅವರನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.
ಲಷ್ಕರ್–ಎ–ತಯಬ, ಜೈಷ್–ಎ–ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ನಂತಹ ಉಗ್ರಗಾಮಿ ಸಂಘಟನೆಗಳು ಹಾಗೂ ಸಿಖ್ ಗುಂಪುಗಳಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಮತ್ತು ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಜೊತೆ ಐಎಸ್ಐ ಅಧಿಕಾರಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇತ್ತೀಚೆಗೆ ಸಭೆ ನಡೆಸಿದ್ದಾರೆ ಎಂದು ಗುಪ್ತಚರ ವರದಿಯನ್ನು ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಂಜಾಬ್, ನವದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸುವುದಕ್ಕೆ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 15–20 ಉಗ್ರರಿಗೆ ಪಂಜಾಬ್ನಲ್ಲಿ ದಾಳಿ ನಡೆಸಲು ವಿಶೇಷ ತರಬೇತಿ ನೀಡಲಾಗಿದೆ. ಅವರಿಗೆ ಸಿಖ್ ಸಂಪ್ರದಾಯ, ಗುರುಕ್ಮುಖಿ ಲಿಪಿಯನ್ನು ಪರಿಚಯಿಸಲಾಗುತ್ತಿದೆ. ಜತೆಗೆ ಪಂಜಾಬ್ನ ಗುಣಲಕ್ಷಣಗಳನ್ನೂ ತಿಳಿಸಲಾಗಿದೆ.
ಖಲಿಸ್ತಾನ್ ಜಿಂದಾಬಾದ್ ಫೋರ್ಸ್ನ ಮುಖ್ಯಸ್ಥ ರಂಜೀತ್ ಸಿಂಗ್ ನೆರವಿನಲ್ಲಿ ಸಿಖ್ ಸಂಪ್ರದಾಯ ಮತ್ತು ಗುರುಮುಖಿ ಲಿಪಿಯ ಬಗ್ಗೆ ಕಳೆದ ಎರಡು ತಿಂಗಳಿನಿಂದ ತರಬೇತಿ ನೀಡಲಾಗುತ್ತಿದೆ. ಐಎಸ್ಐ ಈ ಎಲ್ಲ ಚಟುವಟಿಕೆಗಳಿಗೆ ಹಣ ಒದಗಿಸಿದ್ದು, ವಿವಿಧ ಉಗ್ರಗಾಮಿ ಸಂಘಟನೆಗಳ ನಡುವೆ ಹೆಚ್ಚಿನ ಸಮನ್ವಯ ಸಾಧಿಸುವಂತೆ ಸಲಹೆಯನ್ನೂ ನೀಡಿದೆ.
ಕೆಲವು ಉಗ್ರರು ಈಗಾಗಲೇ ಪಂಜಾಬ್ಗೆ ನುಸುಳಿರಬಹುದು ಅಥವಾ ಮುಂದಿನ ಕೆಲ ದಿನಗಳಲ್ಲಿ ರಾಜ್ಯ ಪ್ರವೇಶಿಸಬಹುದು ಎಂದು ಗುಪ್ತಚರ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ರಾಜ್ಯ ಪೊಲೀಸರಿಗೆ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.
ದಾಳಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಮೂಲಕ ಕಳುಹಿಸಿಕೊಡಲು ಯೋಜಿಸಲಾಗಿದೆ. ಪಂಜಾಬ್ಗೆ ಹೋಗುವ ಲಾರಿಗಳ ಚಾಸಿಯೊಳಗೆ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟು ಸಾಗಿಸಲು ತಂತ್ರ ರೂಪಿಸಲಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳು, ಈ ರಾಜ್ಯಗಳಲ್ಲಿ ನೆಲೆಯಾಗಿರುವ ಸೇನೆ ಮತ್ತು ಕೇಂದ್ರ ಪಡೆಗಳು, ಬಿಎಸ್ಎಫ್ ಮುಂತಾದ ಸಂಸ್ಥೆಗಳೊಂದಿಗೆ ಈ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
