ನವದೆಹಲಿ: ಮಗು ಜನಿಸಿದ ಗಂಟೆಯೊಳಗೆ ಎದೆ ಹಾಲುಣಿಸುವ ತಾಯಂದಿರ ಪ್ರಮಾಣ ಭಾರತದಲ್ಲಿ ಕೇವಲ ಶೇ.44ರಷ್ಟಿದ್ದು, ಎದೆ ಹಾಲುಣಿಸುವ ವಿಷಯದಲ್ಲಿ ದೇಶ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಹಿಂದೆ ಬಿದ್ದಿದೆ.
ಬ್ರೆಸ್ಟ್ ಫೀಡಿಂಗ್ ಪ್ರಮೋಷನ್ ನೆಟ್ ವರ್ಕ್ ಆಫ್ ಇಂಡಿಯಾ(ಬಿಪಿಎನ್ಐ) ಮತ್ತು ಪಬ್ಲಿಕ್ ಹೆಲ್ತ್ ರಿಸೋರ್ಸ್ ನೆಟ್ ವರ್ಕ್(ಪಿಎಚ್ಆರ್ಎನ್) ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿ ಈ ಮಾಹಿತಯನ್ನು ಹೊರಹಾಕಿದೆ. ಪರಿಣಾಮಕಾರಿಯಲ್ಲದ ನೀತಿಗಳು, ಬಜೆಟ್ ಕೊರತೆ, ಸಮನ್ವಯ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಎದೆ ಹಾಲುಣಿಸುವುದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಗಿಲ್ಲ. ಆ ಹಿನ್ನೆಲೆಯಲ್ಲಿ ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಈ ನಿಟ್ಟಿನಲ್ಲಿ ಸಾಧನೆ ಆಮೆಗತಿಯಲ್ಲಿದೆ ಎಂದಿದೆ.
ಈ ವಿಷಯದಲ್ಲಿ ಅತ್ಯಂತ ಹಿಂದುಳಿದ ದೇಶಗಳಾದ ಆಫ್ಘಾನಿಸ್ತಾಸ್, ಬಾಂಗ್ಲಾದೇಶ, ಶ್ರೀಲಂಕಾಗಳು ಕೂಡ ನಿರೀಕ್ಷಿತ ಸಾಧನೆ ಮಾಡಿವೆ. ಭಾರತದಲ್ಲಿ ಈ ನಿಟ್ಟಿನಲ್ಲಿ 7 ವರ್ಷಗಳಲ್ಲಿ ಶೂನ್ಯ ಸಾಧನೆ ಎಂದು ಬಿಪಿಎನ್ಐ ಕೇಂದ್ರ ಸಮನ್ವಯಾಧಿಕಾರಿ ಡಾ. ಅರುಣ್ ಗುಪ್ತಾ ಹೇಳಿದ್ದಾರೆ.