ಬಂಟ್ವಾಳ, ಸೆ.5: ಕೇರಳದ ಎರಡು ತಂಡಗಳ ನಡುವೆ ಕನ್ಯಾನದಲ್ಲಿ ನಡೆದ ಹೊಡೆದಾಟ ಮತ್ತು ಕೊಲೆ ಪ್ರಕರಣವನ್ನು ಭೇದಿಸಿ ಪ್ರಮುಖ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ವಿಟ್ಲ, ಬಂಟ್ವಾಳ ಪೊಲೀಸರ ತಂಡ ಯಶಸ್ವಿಯಾಗಿದೆ. ಆರೋಪಿಗಳಿಂದ ಕಾರು ಮತ್ತು ಹತ್ಯೆಗೆ ಬಳಸಿದ ಮಾರಕಾಯುಧಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ಮೂಲದ ಉಪ್ಪಳ ಕೈಯ್ಯರ ಗ್ರಾಮದ ಅಟ್ಟೆಗೋಳಿ ನಿವಾಸಿ ನಪ್ಪಟ್ ರಫೀಕ್ ಯಾನೆ ಮುಹಮ್ಮದ್ ರಫೀಕ್(26), ಕಾರು ಚಾಲಕ ಪೈವಳಿಕೆ ಗ್ರಾಮದ ಬಾಯಿಕಟ್ಟೆ ನಿವಾಸಿ ಪದ್ದುಯಾನೆ ಪದ್ಮನಾಭ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಘಟನೆಯ ಬಳಿಕ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಬಂಧಿತ ರಿಕ್ಷಾ ಚಾಲಕ ಇಕ್ಕು ಯಾನೆ ಮುಹಮ್ಮದ್ ಇಕ್ಬಾಲ್ ಪೊಯ್ಯಗದ್ದೆ ನೀಡಿದ ಮಾಹಿತಿ ಮತ್ತು ಕನ್ಯಾನ ಪರಿಸರದ ಕೆಲವು ಕ್ರಿಮಿನಲ್ ಹಿನ್ನೆಲೆಯ ಯುವಕರು ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆ. 30ರಂದು ಮದುವೆಗೆ ಬಂದು ಹಿಂದಿರುಗಿ ಹೋಗುವ ವೇಳೆ ಆರೋಪಿಗಳು ಕನ್ಯಾನ ಪೇಟೆಯಲ್ಲಿ ಬೈಕ್ಗೆ ಕಾರು ಢಿಕ್ಕಿ ಹೊಡೆಸಿ, ಬೈಕ್ನಲ್ಲಿದ್ದವರನ್ನು ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ಇದರಿಂದ ಬಾಯಿಕಟ್ಟೆ ನಿವಾಸಿ ಆಸಿಫ್ ಯಾನೆ ಮುಹಮ್ಮದ್ ಆಸಿಫ್(26) ಮೃತಪಟ್ಟಿದ್ದು, ಹಕೀಂ ಹಾಗೂ ರಿಯಾಝ್ ಗಾಯಗೊಂಡಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಒಂದು ವರ್ಷದ ಹಿಂದೆ ಪೈವಳಿಕೆಯ ಝಿಯಾ ಎಂಬಾತನನ್ನು ಮುಹಮ್ಮದ್ ಆಸಿಫ್ ಮತ್ತು ರಿಯಾಝ್ ಪೈವಳಿಕೆಯಲ್ಲಿ ಕೊಲೆಗೈಯಲು ಯತ್ನಿಸಿದ್ದರು ಎಂದು ದೂರಲಾಗಿತ್ತು. ಇದೇ ದ್ವೇಷದಿಂದ ಝಿಯಾ ಬಲಗೈಬಂಟ ನಪ್ಪಟ್ ರಫೀಕ್ ಮತ್ತು ತಂಡ ಕೊಲೆಗೈದಿರುವ ಮಾಹಿತಿಯನ್ನು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಕೃತ್ಯದಲ್ಲಿ ಭಾಗಿಯಾದ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಕೇರಳ ಪರಿಸರದಲ್ಲಿ ತಪ್ಪಿಸಿಕೊಳ್ಳಲು ಸಹಕರಿಸಿದ ಮತ್ತು ಆಶ್ರಯ ನೀಡಿದವರ ಮೇಲೂ ಕೇಸು ದಾಖಲಿಸಲಾಗಿದೆ. ಎರಡು ಗ್ಯಾಂಗ್ನ ಸದಸ್ಯರಿಗೆ ಕನ್ಯಾನ, ಮಿತ್ತನಡ್ಕ, ಮಂಡಿಯೂರು, ಸಾಲೆತ್ತೂರು ತಲೆಕ್ಕಿ ಪರಿಸರದಲ್ಲಿ ಸಹಾಯ ಮಾಡುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಬಂಧಿತ ಆರೋಪಿಗಳ ಪೈಕಿ ನಪ್ಪಟ್ ರಫೀಕ್ ವಿರುದ್ಧ ಕಾಸರಗೋಡು, ಮಂಜೇಶ್ವರ, ಕುಂಬಳೆ, ವಿಟ್ಲ, ಪುತ್ತೂರು ಗ್ರಾಮಾಂತರ, ಮಡಿಕೇರಿ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಕಳವು, ಅಪಹರಣ ಪ್ರಕರಣಗಳು ದಾಖಲಾಗಿದ್ದು, ಕೆಲವು ಕಡೆ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾ ಮತ್ತೆ ಮತ್ತೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶರಣಪ್ಪಎಸ್.ಡಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕ ರಕ್ಷಿತ್ಎ.ಕೆ., ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪ ನಿರೀಕ್ಷಕ ಆನಂದ ಪೂಜಾರಿ, ಮಂಗಳೂರು ಡಿ.ಸಿ.ಐ.ಬಿ. ಸಹಾಯಕ ಉಪ ನಿರೀಕ್ಷಕ ಸಂಜೀವ ಪುರುಷ, ಸಿಬ್ಬಂದಿ ಪಳನಿವೇಲು, ಉದಯರೈ, ಇಕ್ಬಾಲ್ ಎ.ಇ. ತಾರನಾಥ ಎಸ್, ವಿಟ್ಲ ಠಾಣೆಯ ಸಿಬ್ಬಂದಿ ಬಾಲಕೃಷ್ಣ, ಜನಾರ್ದನ, ಪ್ರವೀಣ್ರೈ, ರಕ್ಷಿತ್ರೈ, ಪ್ರವೀಣ್ ಕುಮಾರ್, ಲೋಕೇಶ್ ಬಂಟ್ವಾಳ ವೃತ್ತ ನಿರೀಕ್ಷಕರ ತಂಡದ ಗಿರೀಶ, ನರೇಶ, ಇಲಾಖೆಯ ಚಾಲಕರಾದ ವಿಜಯೇಶ್ವರ, ನಾರಾಯಣ, ವಾಸುನಾಯ್ಕ, ಯೋಗೀಶ, ಪ್ರವೀಣ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

