ಬೆಂಗಳೂರು, ಸೆ.2: ಕೇಂದ್ರದ ‘ರಸ್ತೆ ಸಾರಿಗೆ ಸುರಕ್ಷತಾ ಮಸೂದೆ’ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರ ಕೆಲ ಸಣ್ಣ-ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಸಂಪೂರ್ಣ ಯಶಸ್ವಿಯಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಆಟೊರಿಕ್ಷಾ, ಟ್ಯಾಕ್ಸಿ ಸೇರಿದಂತೆ ಸಾರ್ವಜನಿಕ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ಅಲ್ಲದೆ, ಇಡೀ ದಿನ ಬಸ್ ನಿಲ್ದಾಣಗಳಲ್ಲೇ ಕಾಲ ಕಳೆಯಬೇಕಾದ ದುಸ್ಥಿತಿ ಕಂಡುಬಂತು.
ಶಾಲಾ-ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಕಚೇರಿ ಕೆಲಸ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮನೆಗಳಲ್ಲೇ ಕಾಲ ಕಳೆಯವಂತಾಯಿತು.
ಕಾರ್ಯ ನಿಮಿತ್ತ ಹೊರಊರುಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳವನ್ನು ತಲುಪಲು ಸಾಧ್ಯವಾಗದೆ, ಅತ್ತ ಮನೆಗೂ ಹಿಂದಿರುಗಲು ಆಗದೆ ಪರಿತಪಿ ಸಬೇಕಾಯಿತು. ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣದ ಫ್ಲಾಟ್‌ಫಾರಂ ಗಳು ಸಂಪೂರ್ಣ ಜನರಿಂದ ತುಂಬಿ ತುಳುಕುತ್ತಿದ್ದವು.ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕುಗಳು, ಅಂಚೆ ಕಚೇರಿಗಳು ಸೇರಿ ಸಾರ್ವಜನಿಕ ಸ್ವಾಮ್ಯದ ಕಚೇರಿಗಳು ಸಂಪೂರ್ಣ ಬಂದ್ ಆಗಿದ್ದವು. ಆದರೆ, ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್, ಕಾವೇರಿ ಭವನ ಸೇರಿ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಎದ್ದು ಕಾಣುತ್ತಿತ್ತು.
ಮುಷ್ಕರದ ಸಂದರ್ಭದಲ್ಲಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕೆಲ ದುಷ್ಕರ್ಮಿಗಳು 26 ವೋಲ್ವೋ ಸೇರಿ ಮೂವತ್ತೈದಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ-ಬಿಎಂಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜುಗಳನ್ನು ಪುಡಿಗೈದು ಜಖಂಗೊಳಿಸಿದ್ದಾರೆ ಎಂದು ಗೊತ್ತಾಗಿದೆ.
ಮೆಟ್ರೋ ಸಂಚಾರ ಅಭಾದಿತ: ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪೀಣ್ಯದಿಂದ ಮಲ್ಲೇಶ್ವರಂ, ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ರೈಲನ್ನು ಆಶ್ರಯಿಸಿದ್ದು ವಿಶೇಷವಾಗಿತ್ತು. ರ್ಯಾಲಿ-ಪ್ರತಿಭಟನೆ: ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಗೂ ನೌಕರರು ಹಲವೆಡೆ ಪ್ರತಿಭಟನಾ ರ್ಯಾಲಿ, ಮೆರವಣಿಗೆಗಳನ್ನು ನಡೆಸುವ ಮೂಲಕ ಮೋದಿ ಸರಕಾರದ ಧೋರಣೆ ಖಂಡಿಸಿ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.
15 ಕೋಟಿಗೂ ಅಧಿಕ ಕಾರ್ಮಿಕರು ಭಾಗಿ
ಪ್ರಸ್ತಾಪಿತ ಕಾರ್ಮಿಕ ಕಾನೂನು ಸುಧಾರಣೆಯ ವಿರುದ್ಧ ಭಾರತದಾದ್ಯಂತ ಕೋಟ್ಯಂತರ ಕಾರ್ಮಿಕರು ಬುಧವಾರ ಮುಷ್ಕರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಕಾರ್ಮಿಕ ಸಂಘಟನೆಗಳು ನಡೆಸಿದ ಮೊದಲ ಯಶಸ್ವಿ ಬೃಹತ್ ಪ್ರತಿಭಟನೆ ಇದಾಗಿದೆ.
ಪ್ರತಿಭಟನೆಯಲ್ಲಿ 15 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸಿದ್ದು, ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಹುತೇಕ ಎಲ್ಲ ಸಾರ್ವಜನಿಕ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು. ದೇಶವ್ಯಾಪಿ ಮುಷ್ಕರದಿಂದಾಗಿ ಸುಮಾರು 24,500 ಕೋಟಿ ರೂ. ನಷ್ಟವಾಗಿದೆ ಎಂದು ಕೈಗಾರಿಕಾ ಒಕ್ಕೂಟ ಅಸೋಚಾಂ ಅಂದಾಜು ಮಾಡಿದೆ.
ಮೋದಿ ಸರಕಾರ ತರಲುದ್ದೇಶಿಸಿರುವ ಕಾರ್ಮಿಕ ಸುಧಾರಣೆಗಳು ಉದ್ಯೋಗಗಳನ್ನು ಅಪಾಯಕ್ಕೀಡುಮಾಡುತ್ತವೆ ಎಂಬುದಾಗಿ ಕಾರ್ಮಿಕ ಸಂಘಗಳು ಹೇಳುತ್ತಿವೆ. ಸುಲಭವಾಗಿ ಕಾರ್ಮಿಕರನ್ನು ತೆಗೆದುಹಾಕಿ ಲಾಭದಾಯಕವಲ್ಲದ ಕಾರ್ಖಾನೆಗಳನ್ನು ಮುಚ್ಚಲು ಅವಕಾಶ ಮಾಡಿಕೊಡುವ ಕಾರ್ಮಿಕ ಸುಧಾರಣೆಗಳನ್ನು ರದ್ದುಪಡಿಸುವಂತೆ ಅವು ಸರಕಾರವನ್ನು ಒತ್ತಾಯಿಸಿವೆ.
ಬಂದ್‌ಗೆ ಜನರ ಪ್ರತಿಕ್ರಿಯೆ ಅಮೋಘವಾಗಿತ್ತು ಹಾಗೂ ಬಂದ್‌ನಲ್ಲಿ 15 ಕೋಟಿಗೂ ಅಧಿಕ ಕೆಲಸಗಾರರು ಭಾಗವಹಿಸಿದರು ಎಂದು ಅಖಿಲ ಭಾರತ ಕಾರ್ಮಿಕ ಸಂಘ ಕಾಂಗ್ರೆಸ್‌ನ ಕಾರ್ಯದರ್ಶಿ ಗುರುದಾಸ್ ದಾಸ್‌ಗುಪ್ತ ಹೇಳಿದರು.