ಕನ್ನಡ ವಾರ್ತೆಗಳು

ಪುತ್ತೂರು: ಮುಸುಕುಧಾರಿಗಳ ತಂಡದಿಂದ ಬಜರಂಗದಳ ಸಂಚಾಲಕನ ಕೊಲೆಗೆ ಯತ್ನ ; ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ರಿಕ್ಷಾ ಚಾಲಕರ ಸದಸ್ಯರಿಂದ ಠಾಣೆಗೆ ಮುತ್ತಿಗೆ

Pinterest LinkedIn Tumblr

Rajesh_aouto_driver_1

ಪುತ್ತೂರು, ಸೆ.2: ಪುತ್ತೂರು ನಗರದಲ್ಲಿ ರಿಕ್ಷಾ ಚಾಲಕರಾಗಿರುವ ಪುತ್ತೂರು ಬಜರಂಗದಳದ ಸಂಚಾಲಕ ರಾಜೇಶ್ ಪೆರಿಗೇರಿ ಎಂಬವರನ್ನು ತಂಡವೊಂದು ರಿಕ್ಷಾ ಬಾಡಿಗೆ ನೆಪದಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಘಟನೆ ಒಳಮೊಗ್ರು ಗ್ರಾಮದ, ಬಲ್ಲೇರಿ ರಕ್ಷಿತಾರಣ್ಯದ ಕಾಪಿಕಾಡು ಪುಳಿಕುಕ್ಕು ಎಂಬಲ್ಲಿ ಮಂಗಳವಾರ ನಡೆದಿದೆ.

ಮಂಗಳವಾರ ಸಂಜೆ ರಾಜೇಶ್ ಪೆರಿಗೇರಿ ಪುತ್ತೂರು ಬಸ್ ನಿಲ್ದಾಮದ ಬಳಿಯ ರಿಕ್ಷಾ ಪಾರ್ಕಿಂಗ್ ನಲ್ಲಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಬಳಿ ಬಂದು ಒಳಮೊಗ್ರು ಗ್ರಾಮದ ಕಾಪಿಕಾಡಿಗೆ ಬಾಡಿಗೆಗೆ ಕರೆದಿದ್ದರು. ರಾಜೇಶ್ ಅವರನ್ನು ತನ್ನ ರಿಕ್ಷಾದಲ್ಲಿ ಕರೆದುಕೊಂಡು ತೆರಳಿದ್ದು, ಒಳಮೊಗ್ರು ಗ್ರಾಮದ ಕಾಪಿಕಾಡ್ ನ ನಿರ್ಜನ ಪ್ರದೇಶ ತಲುಪಿದಾಗ ನಿಲ್ಲಿಸುವಂತೆ ಸೂಚಿಸಿದ್ದರು.

ರಾಜೇಶ್ ರಿಕ್ಷಾ ನಿಲ್ಲಿಸಿದಾಗ ಅಪರಿಚಿತ ವ್ಯಕ್ತಿಗಳೊಂದಿಗೆ ಅಲ್ಲಿ ಹೊಂಚು ಹಾಕಿದ್ದ ಐವರು ಮುಸುಕುಧಾರಿ ವ್ಯಕ್ತಿಗಳೂ ಸೇರಿಕೊಂಡು ರಾಜೇಶರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದರು. ದುಷ್ಕರ್ಮಿಗಳು ರಿಕ್ಷಾದ ಚಾವಿ ಮತ್ತು ಮೊಬೈಲ್ ಫೋನ್ ಕಿತ್ತುಕೊಂಡಿದ್ದು, ಅವರ ಕೈಯಿಂದ ತಪ್ಪಿಸಿಕೊಂಡ ರಾಜೇಶ ಕಾಡು ದಾರಿಯಲ್ಲಿ ಓಡಿ ಕುಂಬ್ರಕ್ಕೆ ಬಂದು ಅಲ್ಲಿಂದ ಪುತ್ತೂರನ್ನು ಸುರಕ್ಷಿತವಾಗಿ ಸೇರಿಕೊಂಡಿದ್ದಾರೆ.

ರಾಜೇಶ ದೂರು ನೀಡಲೆಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದಾಗ ಅವರು ದೂರು ಸ್ವೀಕರಿಸಲು ನಿರಾಕರಿಸಿ, ರಿಕ್ಷಾವನ್ನು ನಗರದಿಂದ ಬಾಡಿಗೆಗೆ ಒಯ್ದಿದ್ದರಿಂದ ನಗರ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿದ್ದರೆನ್ನಲಾಗಿದೆ. ಖಾಸಗಿ ಅಸ್ಪತ್ರೆಗೆ ದಾಖಲಾಗಿ ಆಘಾತದಿಂದ ಚೇತರಿಸಿಕೊಂಡ ಬಳಿಕ ರಾಜೇಶ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.

Rajesh_aouto_driver_2

ಇದಾದ ಬಳಿಕ ಬಜರಂಗದಳದ ಮುಂದಾಳುಗಳಿದ್ದ ನಿಯೋಗವೊಂದು ನಗರ ಠಾಣೆಗೆ ತೆರಳಿ ವಿವರಗಳನ್ನು ನೀಡಿ, ಘಟನೆ ನಡೆದ ಸ್ಥಳವು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವುದರಿಂದ ಆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಪುತ್ತೂರಿನ ಗೃಹಿಣಿ ನೌಶದ್ ರ ಅಪಹರಣ ಯತ್ನ ನಡೆದಿತ್ತು ಎನ್ನಲಾದ ಪ್ರಕರಣದ ತನಿಖೆ ನಡೆದು ಇದೊಂದು ಕಲ್ಪಿತ ಘಟನೆ ಎನ್ನುವುದು ತೀರ್ಮಾನವಾಗಿತ್ತು. ಈ ಸಂದರ್ಭ ಪುತ್ತೂರಿನಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಸ್ಥಿತಿ ಮತ್ತು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜೇಶ ಪೆರಿಗೇರಿ ಪೊಲೀಸ್ ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ವಿವರಗಳನ್ನು ಕೋರಿದ್ದರು.

ಈ ವಿಚಾರ ಸಂಘಟನೆಯೊಂದರ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿತ್ತು. ಇದೇ ದ್ವೇಷದಿಂದ ರಾಜೇಶರ ಹಲ್ಲೆಗೆ ಪ್ರಯತ್ನ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಠಾಣೆಗೆ ಮುತ್ತಿಗೆ : ಮನವಿ

ರಿಕ್ಷಾ ಚಾಲಕ ರಾಜೇಶ್ ಪೆರಿಗೆರಿಯವರ ಕೊಲೆಗೆ ಯತ್ನಿಸಿದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ರಿಕ್ಷಾ ಚಾಲಕರು ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.

Write A Comment