ಆಗ್ರಾ, ಆ.28: ಯಮುನಾ ನದಿಗೆ ತ್ಯಾಜ್ಯವನ್ನು ಎಸೆದುದಕ್ಕಾಗಿ ಆಗ್ರಾ ಮಹಾನಗರ ಪಾಲಿಕೆಗೆ ರಾಷ್ಟ್ರೀಯ ನ್ಯಾಯಾಧಿಕರಣವು ರೂ. 1 ಲಕ್ಷ ದಂಡ ವಿಧಿಸಿದೆ.
ಪರಿಸರವಾದಿ ಡಿ.ಕೆ.ಜೋಶಿ ಎಂಬವರ ದೂರಿನ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ನದಿಗೆ ತ್ಯಾಜ್ಯ ನೀರನ್ನು ಬಿಡುಗಡೆ ಮಾಡುವ ಚರಂಡಿ ಹಾಗೂ ಕೊಳವೆ ಮಾರ್ಗವೊಂದನ್ನು ನಾಶಗೊಳಿಸುವಂತೆಯೂ ಗುರುವಾರ ಆದೇಶಿಸಿದೆ.
ಯಮುನಾ ನೆರೆಯ ಬಯಲಲ್ಲಿ ಭಾರೀ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ತ್ಯಾಜ್ಯ ನೀರು ಹಾಗೂ ಘನ ತ್ಯಾಜ್ಯವನ್ನು ನದಿಯಲ್ಲಿ ಬಿಡಲಾಗುತ್ತಿದೆಯೆಂದು ಅರ್ಜಿದಾರರು ಆರೋಪಿಸಿದ್ದರು.
ಯಮುನಾ ನೆರೆ ಬಯಲಿನ ಗಡಿಗಳನ್ನು ಹೊಸದಾಗಿ ಗುರುತಿಸಲು ಅಂತಿಮ ಗಡುವನ್ನೂ ನ್ಯಾಯಾಧಿಕರಣ ನಿಗದಿಗೊಳಿಸಿದೆ.
ವಿಭಾಗೀಯ ಆಯುಕ್ತರ ನೇತೃತ್ವದ ಸಮಿತಿಯೊಂದು ನೆರೆ ಬಯಲಿನ ಅನಧಿಕೃತ ನಿರ್ಮಾಣಗಳನ್ನು ಗುರುತಿಸಿ, ಕ್ರಮವನ್ನು ಶಿಫಾರಸು ಮಾಡಲಿದೆ.
ಯಮುನಾ ತೀರದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣದ ಮೇಲಿನ ನಿಷೇಧ ಮುಂದುವರಿಯಲಿದೆಯೆಂದು ಜೋಶಿ ತಿಳಿಸಿದ್ದಾರೆ.