ಮಂಗಳೂರು, ಆಗಸ್ಟ್. 17: ಸಣ್ಣ ನೀರಾವರಿ ಗಣತಿ ಕಾರ್ಯವು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ರಾಜ್ಯದಾದ್ಯ೦ತ ಪ್ರತೀ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಕಳೆದ 2015-16 ರ ಸಾಲಿನಲ್ಲಿ 4 ನೇ ಗಣತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಪ್ರಸ್ತುತ 5 ನೇ ಸಣ್ಣ ನೀರಾವರಿ ಗಣತಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಅವರು ಸೋಮವಾರ ಈ ಸಂಬಂಧ ತಮ್ಮ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗಣತಿ ಕಾರ್ಯವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ. ಸದರಿ ಗಣತಿ ಕಾರ್ಯವು ಅತ್ಯ೦ತ ಪ್ರಮುಖವಾಗಿದ್ದು, ಈ ಗಣತಿಯಲ್ಲಿ ಸಂಗ್ರಹಿಸಲಾಗುವ ವಿವರಗಳು ಮುಂದಿನ ಯೋಜನೆಗಳನ್ನು ರೂಪಿಸಲು ಬಹಳ ಉಪಯುಕ್ತವಾಗಿದ್ದು ಗಣತಿ ಕಾರ್ಯವನ್ನು ನಿಖರವಾಗಿ, ಕ್ರಮಬದ್ಧವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯ ಹಾಗೂ ಸಹಕಾರದಿಂದ ನಿರ್ವಹಿಸಬೇಕಾಗಿರುತ್ತದೆ. ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಕಾರ್ಯಕಾರಿ ಅಭಿಯಂತರ ಡಿ.ಆರ್. ರಾಮಚಂದ್ರ ಸಭೆಯಲ್ಲಿ ಗಣತಿಕಾರ್ಯದ ವಿವರ ನೀಡಿ, 4 ಎಕ್ಟೇರು ವರೆಗಿನ ಯೋಜನೆಗಳು ತಾಲೂಕು ಪ೦ಚಾಯತ್ ಅಡಿಯಲ್ಲಿ ಬರುತ್ತಿದ್ದು 40 ಎಕ್ಟೇರು ವರೆಗಿನ ಯೋಜನೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದು, 40-2000 ಎಕ್ಟೇರು ವರೆಗಿನ ಯೋಜನೆಗಳು ಸಣ್ಣ ನೀರಾವರಿ ವ್ಯಾಪ್ತಿಗೊಳಪಡುತ್ತಿದೆ. ಇದಲ್ಲದೆ ವೈಯಕ್ತಿಕವಾಗಿ ರೈತರು, ಸಹಕಾರಿ ಸಂಘದ ಒಡೆತನ, ರೈತ ಸಂಘದ ಒಡೆತನ, ಇನ್ನಿತರ ಒಡೆತನದ ಅಡಿಯಲ್ಲಿ ನಿರ್ಮಾಣಗೊ೦ಡ ಸಣ್ಣ ನೀರಾವರಿ ಯೋಜನೆಗಳ ಗಣತಿ ಕಾರ್ಯವನ್ನು ಸಹ ಮಾಡಬೇಕಾಗಿರುತ್ತದೆ. ಪ್ರಮುಖವಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಅಂತರ್ಜಲ ಯೋಜನೆಗಳು ಮತ್ತು ಮೇಲ್ಮೈ ಜಲ ಯೋಜನೆಗಳು ಎಂಬುದಾಗಿ ವಿಂಗಡಿಸಿದ್ದು, ಅಂತರ್ಜಲ ಯೋಜನೆಯಡಿಯಲ್ಲಿ ಅಗೆದ ಬಾವಿ, ಆಳವಲ್ಲದ ಕೊಳವೆ ಬಾವಿ, ಮಧ್ಯಮ ಆಳದ ಕೊಳವೆ ಬಾವಿ ಮತ್ತು ಆಳದ ಕೊಳವೆ ಬಾವಿ ಎಂಬುದಾಗಿ ವಿಂಗಡಿಸಲಾಗಿರುತ್ತದೆ. ಮೇಲ್ಮೈ ಜಲ ಯೋಜನೆಯಲ್ಲಿ ಮೇಲ್ಮೈ ಜಲ ಹರಿಯುವ ನೀರಾವರಿ ಯೋಜನೆಗಳು ಮತ್ತು ಏತ ನೀರಾವರಿ ಯೋಜನೆಗಳಿರುತ್ತವೆ ಎಂದರು.
ಕ್ಷೇತ್ರ ಗಣತಿದಾರರು (ಗ್ರಾಮ ಲೆಕ್ಕಾಧಿಕಾರಿಗಳು) ಪ್ರತಿಯೊ೦ದು ಗ್ರಾಮದಲ್ಲಿ ಇರುವ ಸಣ್ಣ ನೀರಾವರಿ ಯೋಜನೆಗಳನ್ನು ಪರಿಶೀಲಿಸಿ ಗಣತಿ ಕಾರ್ಯ ನಡೆಸಬೇಕಾಗಿರುತ್ತದೆ. ಎಣಿಕೆದಾರರಿ೦ದ ಕ್ಷೇತ್ರ ಗಣತಿ ಕಾರ್ಯ ಪೂರ್ಣಗೊ೦ಡ ನಂತರ ತಾಲೂಕು ಮಟ್ಟದ ಮೇಲ್ವಿಚಾರಕರಾದ ತಹಶೀಲ್ದಾರರುಗಳು ಹಾಗೂ ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರು ನಿಯಮಿತವಾಗಿ ಕ್ಷೇತ್ರಗಳ ಮೇಲ್ವಿಚಾರಣೆ ಕಾರ್ಯ ಕೈಗೊ೦ಡು ಶೇಕಡಾ 10 ರಷ್ಟು ಅಥವಾ ಗರಿಷ್ಠ 300 ಯೋಜನೆಗಳನ್ನು ಆಯ್ಕೆ ಮಾಡಿ ಪರಿಶೀಲನಾ ಕಾರ್ಯ ಕೈಗೊಳ್ಳಬೇಕಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಗ್ರಹಣಾಧಿಕಾರಿಗಳು/ಸಹಾಯಕ ನಿರ್ದೆಶಕರು/ಸಹಾಯಕ ಸಾಂಖ್ಯಿಕ ಅಧಿಕಾರಿ ಇವರುಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಗಣತಿ ಮಾಡಲಾದ ಗ್ರಾಮಗಳ ಪೈಕಿ ಕನಿಷ್ಠ 5 ಗ್ರಾಮಗಳಲ್ಲಿ ಪ್ರತಿಶತ 10 ರಷ್ಟು ಯೋಜನೆಗಳನ್ನು ಆಯ್ಕೆ ಮಾಡಿ ಭೌತಿಕವಾಗಿ ಸಂದರ್ಶಿಸಿ ಎಣಿಕೆಯ ಗುಣಮಟ್ಟ ಮತ್ತು ವ್ಯಾಪ್ತಿಯ ಬಗ್ಗೆ ಪರಿಶೀಲನೆ ನಡೆಸುವರು ಎಂದು ರಾಮಚಂದ್ರ ತಿಳಿಸಿದರು.
ಗಣತಿ ಕಾರ್ಯವನ್ನು ನಡೆಸುವ ಬಗ್ಗೆ ಪ್ರತಿಯೊ೦ದು ತಾಲೂಕಿನಲ್ಲಿಯೂ ಕ್ಷೇತ್ರ ಗಣತಿದಾರರಿಗೆ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಈ ತಿ೦ಗಳ ಅ೦ತ್ಯದೊಳಗೆ ಒ೦ದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿರುತ್ತದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
