ಕಾಸರಗೋಡು,ಆ.10: ಗಡಿನಾಡ ಕನ್ನಡ ಹೋರಾಟಗಾರ, ಸಾಹಿತಿ, ಶತಾಯುಷಿ ನಾಡೋಜ ಡಾ.ಕಯ್ಯಾರ ಕಿಞ್ಜಣ್ಣ ರೈ( 101) ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಸರ್ಕಾರಿ ಸಕಲ ಗೌರವಗಳೊಂದಿಗೆ ಸಾವಿರಾರು ಅಭಿಮಾನಿಗಳು, ಹಿತೈಷಿಗಳು, ಬಂಧುಮಿತ್ರರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು.
ಕಾಸರಗೋಡಿನ ಬದಿಯಡ್ಕದ ನಿವಾಸ ಕವಿತಾ ಕುಟೀರ ಪರಸರದಲ್ಲಿ ಇಂದು ಮಧ್ಯಾಹ್ನ 12.30ರಲ್ಲಿ ಹಿರಿಯ ಪುತ್ರ ದುರ್ಗಪ್ರಸಾದ್ ರೈ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಯಿತು.
ಕಳೆದ ಜೂ.8ರಂದು ನೂರು ವರ್ಷಗಳನ್ನು ಪೂರೈಸಿದ್ದ ಕಯ್ಯಾರ ಅವರು ಹಲವು ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಮಧ್ಯಾಹ್ನ 3.30ರ ಸಮಯದಲ್ಲಿ ಇಹಲೋಕ ತ್ಯಜಿಸಿದ್ದರು.
ಕರ್ನಾಟಕದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇಂದು ಬೆಳಗ್ಗೆ ಬದಿಯ್ಕಡದ ನಿವಾಸಕ್ಕೆ ಭೇಟಿ ಹಿರಿಯ ಸಾಹಿತಿಗೆ ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಅಂತ್ಯಸಂಸ್ಕಾರದಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸಚಿವರು, ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ದಕ್ಷಿಣ ಕರ್ನಾಟಕದ ಎಲ್ಲರೂ ವಿರೋಧವಾಗಿದ್ದರೂ ಕಯ್ಯಾರರು ಮಾತ್ರ ಏಕೀಕರಣದ ಪರ ದನಿಗೂಡಿಸಿ ಹೋರಾಡಿದ್ದರು. ಅಲ್ಲದೆ ಗೋಕಾಕ್ ಚಳುವಳಿ ಮತ್ತು ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಡೆದ ಚಳುವಳಿಯಲ್ಲೂ ಭಾಗಿಯಾಗಿದ್ದರು.
1957ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುವೆಂಪು ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಕಾಸರಗೋಡು ಸೇರಿದಂತೆ ಗಡಿಭಾಗದ ಎಲ್ಲ ಕನ್ನಡಿಗರ ನೋವನ್ನು ತಮ್ಮ ಓ ಕನ್ನಡ ಬಾಂಧವರೇ ಮನೆಗೆ ಬೆಂಕಿ ಬಿದ್ದಿದೆ ಎಂಬ ಕವನದಲ್ಲಿ ತೋಡಿಕೊಂಡಿದ್ದರು. ರಾಜ್ಯಗಳ ವಿಭಜನೆ ಬಳಿಕ ಕಾಸರಗೋಡು, ಕೇರಳದಲ್ಲಿ ವಿಲೀನವಾದ ಬಗ್ಗೆ ಅಸಮಾಧಾನ ಹೊಂದಿದ್ದ ಅವರು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಹಲವು ಹೋರಾಟಗಳನ್ನು ಮಾಡಿದ್ದರು. ಶ್ರೀಮುಖ, ಐಕ್ಯಗಾನ, ಪುನರ್ನವ, ಮಕ್ಕಳ ಪದ್ಯ ಮಂಜರಿ ಭಾಗ-1, ಮಕ್ಕಳ ಪದ್ಯ ಮಂಜರಿ ಭಾಗ-2, ಚೇತನ, ಪಂಚಮಿ, ಕೊರಗ ಮತ್ತು ಕೆಲವು ಕವನಗಳು, ಶತಮಾನದ ಗಾಣ(111 ಕವನಗಳು), ಪ್ರತಿಭಾಪಯಸ್ವಿನೀ, ಗಂಧವತೀ, ಆಶಾನರ ಖಂಡ, ಕಾವ್ಯಗಳು -( ಮಲಯಾಳದ ಮಹಾಕವಿ ಪದ್ಯಾನುವಾದ ಕೇಂದ್ರ ಸಾಹಿತ್ಯ ಅಕಾಡೆಮಿವತಿಯಿಂದ ಪ್ರಕಟಿತ), ಎನ್ನಪ್ಪೆ ತುಳುವಪ್ಪೆ (ತುಳು) ಕಯ್ಯಾರರು ರಚಿಸಿದ ಸಾಹಿತ್ಯ ಕೃತಿಗಳು. ಇವಲ್ಲದೆ ಹಲವು ಗದ್ಯಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಹಾಗೂ ಗೌರವ ಫೆಲೋಶಿಪ್‌ಗಳು ಸಂದಿವೆ.
