ಮಂಗಳೂರು, ಜು.21: ಮರಳುಗಾರಿಕೆಗೆ ನಿಷೇಧ ಹೇರಿದ ದ.ಕ.ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ತಕ್ಷಣ ಮರಳು ಪೂರೈಸುವಂತೆ ಮರಳು ಮಾಫಿಯವನ್ನು ಮಟ್ಟ ಹಾಕುವಂತೆ ಆಗ್ರಹಿಸಿ ಆಗ್ರಹಿಸಿ ಕಟ್ಟಡ ಕಾರ್ಮಿಕರು ಸೋಮವಾರ ಸಿಐಟಿಯು ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಟ್ಟಡ ಕಾರ್ಮಿಕರು ‘ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿ ಕೊಡಿ, ಮರಳು ಮಾಫಿಯಾವನ್ನು ಮಟ್ಟಹಾಕಿರಿ’ ಎಂದು ಘೋಷಣೆ ಕೂಗಿದರು. ಪ್ರತಿಭಟನಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್, ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾದ ಪ್ರಮುಖ ಕಚ್ಚಾವಸ್ತು ಮರಳಿನ ಅಭಾವದಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾವಿರಾರು ಕಟ್ಟಡ ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ.
ಮರಳುಗಾರಿಕೆಗೆ ನಿಷೇಧ ಹೇರಿದ ಜಿಲ್ಲಾಡಳಿತದ ಕ್ರಮ ವನ್ನು ಮುಂದಿಟ್ಟುಕೊಂಡು ಮರಳಿನ ಕೃತಕ ಅಭಾವವನ್ನು ಸೃಷ್ಟಿಸಿದ ಮರಳಿನ ಕಾಳ ಸಂತೆಕೋರರು ವಿಪರೀತ ದರ ನಿಗದಿಪಡಿಸಿ ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಜೆಸಿಬಿ ಮೂಲಕ ಮರಳುಗಾರಿಕೆ ನಡೆಸಬಾರದು ಎಂದು ಕಟ್ಟುನಿಟ್ಟಿನ ಆದೇಶವಿದ್ದರೂ ಹಾಡಹಗಲಲ್ಲೇ ಯಂತ್ರ ಬಳಸಿ ಮರಳು ತೆಗೆದು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ರಾಜಾರೋಷವಾಗಿ ಸಾಗಾಟವಾಗುತ್ತಿದೆ ಎಂದು ಆಪಾದಿಸಿದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು, ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ಸಂತೋಷ್ ಶಕ್ತಿನಗರ, ದಲಿತ ಹಕ್ಕುಗಳ ಸಮಿತಿ ಮುಖಂಡ ಲಿಂಗಪ್ಪನಂತೂರು, ಸಿವಿಲ್ ಕಾಂಟ್ರಾಕ್ಟ್ ದಾರರ ಸಂಘಟನೆಯ ಮುಖಂಡ ದಿನಕರ್ ಸುವರ್ಣ, ಧನಂಜಯ ಮಾತನಾಡಿದರು. ಹೋರಾಟದ ನೇತೃತ್ವವನ್ನು ಕಟ್ಟಡ ನಿರ್ಮಾಣ ಕಾರ್ಮಿಕರ ಮಂಗಳೂರು ನಗರ ಅಧ್ಯಕ್ಷ ರವಿಚಂದ್ರ ಕೊಂಚಾಡಿ, ಅಶೋಕ್ ಶ್ರೀಯಾನ್, ದಿನೇಶ್ ಶೆಟ್ಟಿ, ಉಮಾ ಶಂಕರ್, ಕಿಶೋರ್ ಪೊರ್ಕೋಡಿ, ಅಶೋಕ್ ಸಾಲ್ಯಾನ್, ಪ್ರೇಮನಾಥ ಜಲ್ಲಿಗುಡ್ಡೆ, ಸಿಐಟಿಯು ಮುಖಂಡ ಮುಹಮ್ಮದ್ ಅನ್ಸಾರ್ ವಹಿಸಿದ್ದರು.





