ಬಂಟ್ವಾಳ, ಜು.16: ಫರಂಗಿಪೇಟೆಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ನಿರ್ಮಾಣ ಹಂತದ ಕಟ್ಟಡದ ಮೇಲೆ ಏಕಾಏಕಿ ಗುಡದ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ನಡೆದ ದಿನವೇ ರಾತ್ರಿ ಮತ್ತೆ ಗುಡ್ಡ ಕುಸಿದಿದೆ. ಮಧ್ಯರಾತ್ರಿಯ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಮುಂಜಾನೆ 3 ಗಂಟೆ ಸುಮಾರಿಗೆ ಗುಡ್ಡ ಬಹುತೇಕ ಕುಸಿದು ಬಿದ್ದಿದೆ. ಇದರಿಂದ ತಳಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮಣ್ಣಿನಿಂದ ಬಹುತೇಕ ಮುಚ್ಚಿಹೋಗಿದೆ. ಮಳೆ ಬಿರುಸುಗೊಂಡಿರುವುದರಿಂದ ಮತ್ತಷ್ಟು ಭೂ ಕುಸಿತ ಉಂಟಾಗುವ ಲಕ್ಷಣ ಕಾಣಿಸುತ್ತಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ : ಫರಂಗಿಪೇಟೆಯಲ್ಲಿ ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಬುಧವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಪಾಯಕ್ಕೆ ಸಿಲುಕಿರುವ ಮನೆಗಳಿಗೂ ಭೇಟಿ ನೀಡಿದ ಅವರು ಇಲ್ಲಿನ ನಿವಾಸಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಪಿಡಿಒಗೆ ಸೂಚನೆ ನೀಡಿದ್ದಾರೆ.
ತಾಲೂಕಾಡಳಿತದ ವತಿಯಿಂದ ಸುಜೀರು ಸರಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಆದರೆ ತೊಂದರೆಗೆ ಸಿಲುಕಿರುವ ನಿವಾಸಿಗಳು ಗಂಜಿ ಕೇಂದ್ರಕ್ಕೆ ತೆರಳಲು ನಿರಾಕರಿಸಿದ್ದು, ತಮ್ಮ ಸಂಬಂಧಿಕರ ಮನೆಗೆ ತೆರಳುವುದಾಗಿ ಹೇಳಿದ್ದಾರೆ.
ಸಂಸದರ ಭೇಟಿ : ಫರಂಗಿಪೇಟೆಯಲ್ಲಿ ಮಂಗಳವಾರ ಗುಡ್ಡ ಜರಿದು ಮೂವರು ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಬುಧವಾರ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಜಿ.ಪ.ಸದಸೈ ಜಯಶ್ರೀ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮ ಪಂಚಾಯತ್ಗೆ ಭೇಟಿ ನೀಡಿದ ಅವರು ಹೆದ್ದಾರಿ ಬದಿ ಸ್ಥಳವನ್ನು ಬಿಡದೆ ಮನೆ ನಿರ್ಮಿಸಿದವರಿಗೆ ನೋಟಿಸ್ ನೀಡುವಂತೆ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿ ಇರುವ ತೆಂಗಿನ ಮರಗಳ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ದುರ್ಘಟನೆಯಲ್ಲಿ ಮೃತಪಟ್ಟವರ ದೇಹಗಳನ್ನು ಅವರ ಊರಿಗೆ ತಲುಪಿಸುವ ಜವಾಬ್ದಾರಿ ಅವರನ್ನು ದುಡಿಸಿಕೊಂಡ ಮಾಲಕ ಮತ್ತು ಗುತ್ತಿಗೆಯವರದ್ದು ಎಂದು ತಿಳಿಸಿದರು.
File Photos
ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳು :
ಮಂಗಳವಾರ ನಡೆದ ದುರಂತದಲ್ಲಿ ಮೃತಪಟ್ಟ ಕಾರ್ಮಿಕರಾದ ಮಿಲೋನ್, ತೋರಿಕೋಲ್ ಹಾಗೂ ಮೈಮಿನೋಲ್ರ ಮೃತದೇಹಗಳನ್ನು ಮಂಗಳೂರು ವೆನ್ಲಾಕ್ನ ಶವಾಗಾರದಲ್ಲಿರಿಸಲಾಗಿದೆ. ಈ ಪೈಕಿ ಒಂದು ಮೃತದೇಹದ ವಾರಸುದಾರರು ಗುರುವಾರ ಮಂಗಳೂರಿಗೆ ಬರುವವರಿದ್ದು, ಮೃತದೇಹವನ್ನು ತಮ್ಮ ರಾಜ್ಯಕ್ಕೆ ಸಾಗಿಸಲಿದ್ದಾರೆ. ಆದರೆ ಇನ್ನೆರಡು ಮೃತದೇಹಗಳ ವಾರಸುದಾರರ ವಿಳಾಸ ಇನ್ನೂ ಸ್ಪಷ್ಟವಾಗಿಲ್ಲ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪತಿಳಿಸಿದ್ದಾರೆ.
ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಕಂದಾಯಾಧಿಕಾರಿ ನಾರಾಯಣ ಪೂಜಾರಿ, ಗ್ರಾಮಕರಣಿಕ ಪ್ರದೀಪ್, ಜಿಪಂ ಸಹಾಯಕ ಕಾರ್ಯಪಾಲ ಅಭಿಯಂತರ ನರೇಂದ್ರ ಬಾಬು, ಕಿರಿಯ ಎಂಜಿನಿಯರ್ ರವಿಚಂದ್ರ ಹಾಜರಿದ್ದರು. ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಮುಹಮ್ಮದ್ ಶರೀಫ್, ಸದಸ್ಯರಾದ ಮುಹಮ್ಮದ್ ಹಾಶೀರ್, ಖಾದರ್ ಪಾವೂರು, ಅಖ್ತರ್ ಹುಸೈನ್ ಮೊದಲಾವರು ಸ್ಥಳದಲ್ಲಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.









