ಪುತ್ತೂರು, ಜು.13 : ಅಕ್ರಮವಾಗಿ ಕರುವೊಂದನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ 20 ಹೆಚ್ಚು ಮಂದಿಯಿದ್ದ ತಂಡವೊಂದು ನಾಲ್ವರು ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ಸಂಜೆ ಪುತ್ತೂರು ತಾಲೂಕಿನ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ನಡೆದಿದೆ.
ಗೋಳಿತೊಟ್ಟು ಜನತಾ ಕಾಲನಿ ಬಳಿ ಹಲ್ಲೆ ನಡೆಸಲಾಗಿದ್ದು, ಹಲ್ಲೆಯಿಂದ ಗಾಯಗೊಂಡವರನ್ನು ಸ್ಥಳೀಯರಾದ ಫೈರೋಝ್ (29), ಅಬ್ದುರ್ರಹ್ಮಾನ್ (39), ಹೈದರ್ (27) ಹಾರಿಸ್ (28) ಎಂದು ಗುರುತಿಸಲಾಗಿದೆ. ಈ ಪೈಕಿ ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಫೈರೋಝ್ ಮತ್ತು ಅಬ್ದುರ್ರಹ್ಮಾನ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳು ನೀಡಿರುವ ಮಾಹಿತಿಯಂತೆ ತಾವು ಹಾರಿಸ್ ಎಂಬವರಿಗೆ ಸೇರಿದ ಕರುವೊಂದನ್ನು ಅವರ ಚಿಕ್ಕಪ್ಪನ ತೋಟದಿಂದ ಹಾರಿಸ್ರ ಮನೆಗೆ ತರುತ್ತಿದ್ದ ವೇಳೆ ಸ್ಥಳೀಯ ಬಜರಂಗದಳದರು ಎನ್ನಲಾದ ಚಂದ್ರ, ಡೀಕಯ್ಯ ಪೂಜಾರಿ, ಉಮೇಶ್, ಶೇಖರ ಪೂಜಾರಿ, ರುಘುನಾಥ, ಜಯಂತ, ಉಮೇಶ ಅಮ್ರಾಜೆ, ರಾಜೇಶ್, ವಿನಯ, ಗಣೇಶ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಯ ತಂಡ ಕಾರು ಮತ್ತು ಬೈಕ್ಗಳಲ್ಲಿ ಆಗಮಿಸಿ ತಮಗೆ ರಾಡ್ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ದಿಗ್ಬಂಧನ ವಿಧಿಸಿದ್ದರು. ಈ ಬಗ್ಗೆ ಮಾಹಿತಿ ಅರಿತ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರ ಮುಂದೆ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪಿಯಾದ ಡೀಕಯ್ಯ ಪೂಜಾರಿ ಈ ಹಿಂದೆ ಗೋಳಿತೊಟ್ಟುನಲ್ಲಿ ನಡೆದ ಕೋಮುಗಲಭೆಯಲ್ಲಿ ಹಲ್ಲೆ ನಡೆಸಿದ ಆರೋಪಿಯಾಗಿದ್ದು ಆತನ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೆ ರಘುನಾಥ, ಉಮೇಶ ಮತ್ತು ಹರೀಶ ಕರಾಯ ಮಸೀದಿಗೆ ಕಲ್ಲೆಸೆದ ಆರೋಪಿಗಳು ಎಂದು ಗಾಯಾಳುಗಳು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


