ಮುಂಬೈ: ಏರ್ ಇಂಡಿಯಾ ಸಂಸ್ಥೆ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದವರ ಮೇಲೆ ಇದೇ ಮೊದಲ ಬಾರಿಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ವಿಳಂಬವಾಗಿ ಬಂದು ವಿಮಾನ ತಡವಾಗುವುದಕ್ಕೆ ಕಾರಣರಾದ 17 ಮಂದಿ ಗಗನ ಸಖಿಯರನ್ನು ಅಮಾನತು ಮಾಡಿ ಆದೇಶಿಸಿದೆ.
ವಿಮಾನ ಹಾರಾಟ ವಿಳಂಬವಾದರೆ ಅದಕ್ಕೆ ವಿಮಾನ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಸಿದ್ದ ಏರ್ ಇಂಡಿಯಾ ಇದಕ್ಕಾಗಿ ಅವರುಗಳಿಂದ ಅತಿ ಹೆಚ್ಚು ದಂಡವನ್ನೂ ವಸೂಲಿ ಮಾಡುತ್ತಿತ್ತು. ಈಗ ಮೂರಕ್ಕಿಂತ ಅಧಿಕ ಬಾರಿ ಲೇಟಾಗಿ ಬಂದು ವಿಮಾನ ಹಾರಾಟ ವಿಳಂಬವಾಗುವುದಕ್ಕೆ ಕಾರಣರಾದ 17 ಮಂದಿ ಗಗನ ಸಖಿಯರ ವಿರುದ್ದ ಮುಲಾಜಿಲ್ಲದೇ ಕ್ರಮ ಜರುಗಿಸಿದೆ.
ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ ಒಟ್ಟು 272 ಮಂದಿಯನ್ನು ಏರ್ ಇಂಡಿಯಾ ಇದುವರೆಗೂ ಅಮಾನತುಗೊಳಿಸಿದ್ದು, ದುಬೈನಿಂದ ಭಾರತಕ್ಕೆ ಬರುವ ಏರ್ ಇಂಡಿಯಾ ವಿಮಾನದ ಪೈಲೆಟ್ ಒಬ್ಬ ಮದ್ಯಪಾನ ಮಾಡಿದ್ದ ಕಾರಣಕ್ಕಾಗಿ ಆತನನ್ನೂ ಮನೆಗೆ ಕಳುಹಿಸಲಾಗಿದೆ. ಖಾಸಗಿ ವಿಮಾನ ಯಾನ ಸಂಸ್ಥೆಗಳು ಪ್ರಬಲ ಪೈಪೋಟಿ ಒಡ್ಡುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ವಿಮಾನ ಹಾರಾಟ ನಡೆಸಲೆಂಬ ಉದ್ದೇಶದಿಂದ ಹಾಗೂ ಆ ಮೂಲಕ ಪ್ರಯಾಣಿಕರ ವಿಶ್ವಾಸಾರ್ಹತೆ ಗಳಿಸಲು ಏರ್ ಇಂಡಿಯಾ ಸಂಸ್ಥೆ ಯತ್ನಿಸುತ್ತಿದೆ.
