(ಚಿದು ಬರೆಯುವ ಪ.ಗೋ ಸರಣಿ-1)
ನಾಡಿನ ಹಿರಿಯ ಪತ್ರಕರ್ತರು ಮಾತ್ರವಲ್ಲ ಸ್ವಾಭಿಮಾನಿ ಪತ್ರಕರ್ತರೂ ಕೂಡಾ ಆಗಿದ್ದವರು ಪದ್ಯಾಣ ಗೋಪಾಲಕೃಷ್ಣ. ಇವರನ್ನು ಜನ ಗುರುತಿಸಿದ್ದು ಮತ್ತು ಅವರು ಕರೆದುಕೊಂಡದ್ದೂ ಕೂಡಾ ಪ.ಗೋಪಾಲಕೃಷ್ಣ ಎಂದೇ. ಕಡಲತಡಿಯಿಂದ ಘಟ್ಟವೇರಿದ ಪತ್ರಕರ್ತ ಪ.ಗೋ ಮೊದಲು ಸಂಪಾದಿಸಿದ್ದು ಬದುಕುವ ಅನುಭವವನ್ನು ಮತ್ತು ಗಳಿಸಿದ್ದು ಜೀವನಾನುಭವವನ್ನು. ಅವರೇ ಹೇಳಿಕೊಂಡಂತೆ 1955ರಲ್ಲಿ ಮಂಗಳೂರಿನಿಂದ ಉದ್ಯೋಗ ಹರಸಿಕೊಂಡು ಅದೂ ಪತ್ರಿಕೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೆಂಗಳೂರು ತಲಪಿದರು.
ಪ.ಗೋ ವೃತ್ತಿ ಜೀವನದ ಮೊದಲ ಪತ್ರಿಕೆ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ವಿಶ್ವಕರ್ನಾಟಕದಲ್ಲಿ ಉಪಸಂಪಾದಕರಾಗಿ. ಅದು ಸಂಜೆಪತ್ರಿಕೆ ಆಗ. ಕುಮಾರ ವೆಂಕಣ್ಣ ಪ.ಗೋ ಮೊಟ್ಟ ಮೊದಲ ಬಾರಿ ಭೇಟಿ ಮಾಡಿದ ಆ ಪತ್ರಿಕೆಯ ಸಹಾಯಕ ಸಂಪಾದಕರಂತೆ. ಪ.ಗೋ ತಮ್ಮ ಆತ್ಮಕಥನದಲ್ಲಿ ಈ ಘಟನೆಯನ್ನು ಅತ್ಯಂತ ವಿವರವಾಗಿ ಹೇಳಿಕೊಂಡು ತಾನು ಕೆಲಸಗಿಟ್ಟಿಸಿಕೊಂಡ ಬಗೆಯನ್ನು ವಿವರಿಸಿದ್ದಾರೆ.
ಮುಂದೆ ಅವರು ತಾಯಿನಾಡು, ಕಾಂಗ್ರೆಸ್ ಸಂದೇಶ, ಸಂಯುಕ್ತ ಕರ್ನಾಟಕ ಹೀಗೆ ಪತ್ರಿಕಾಲಯಗಳನ್ನು ಅಡ್ಡಾಡಿಕೊಂಡು ವಾಪಸಾದದ್ದು ಮಂಗಳೂರಿಗೆ. ಆಗ ನವಭಾರತ ಅತ್ಯಂತ ಹೆಚ್ಚು ಪ್ರಸಾರ ಹೊಂದಿದ್ದ ಪತ್ರಿಕೆ. ಅದರಲ್ಲಿ ಉಪಸಂಪಾದಕರಾಗಿ ಸೇರಿಕೊಂಡರು. ಮುಂದೆ ಯು.ನರಸಿಂಹ ರಾವ್ ಆರಂಭಿಸಿದ ಕನ್ನಡವಾಣಿಗೆ ಬಂದರು. ಪುತ್ತೂರಿನಿಂದ ಪ್ರಕಟವಾಗುತ್ತಿದ್ದ ವಿಚಾರವಾಣಿಯಲ್ಲಿ ಕೆಲಸ ಮಾಡಿದರು. ಕೊಡಗು ಜಿಲ್ಲೆ ಮಡಿಕೇರಿಯ ಶಕ್ತಿ ಪತ್ರಿಕೆಯಲ್ಲೂ ತಮ್ಮ ಛಾಪು ಮೂಡಿಸಿದರು.
ಇಷ್ಟೆಲ್ಲಾ ಅನುಭವ ಗಳಿಸಿದ ಮೇಲೆ ಪ.ಗೋ ಸ್ವಂತ ಪತ್ರಿಕೆ ಆರಂಭಿಸಿದರು. ವಾರ್ತಾಲೋಕ ಎನ್ನುವ ಸಂಜೆ ಪತ್ರಿಕೆಯ ಸಂಪಾದಕ, ಪ್ರಕಾಶಕರಾಗಿ ಪತ್ರಿಕೆಯನ್ನು ತಾವೇ ಮಾರಾಟ ಮಾಡುವ ತನಕದ ಕೆಲಸಗಳನ್ನು ನಿಭಾಯಿಸಿ ಕೈಸುಟ್ಟುಕೊಂಡು ಸ್ವಂತ ಪತ್ರಿಕೆ ಸಹವಾಸವೇ ಬೇಡವೆಂದು ಕನ್ನಡಪ್ರಭ, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವರದಿಗಾರರಾಗಿ ಸೇರಿದರು. ಅಲ್ಲಿಂದಲೂ ಹೊರಬಿದ್ದು ಟೈಮ್ಸ್ ಆಫ್ ಡೆಕ್ಕನ್ ಪತ್ರಿಕೆ ಸೇರಿದರು. ಇದು 80ರದಶಕದಲ್ಲಿ ಪತ್ರಿಕೋದ್ಯಮದಲ್ಲಿ ಸಂಚಲನ ಮೂಡಿಸಿದ್ದ ಪತ್ರಿಕೆ. ಟೈಮ್ಸ್ ಆಫ್ ಡೆಕ್ಕನ್, ಮುಂಜಾನೆ, ಪ್ರಜಾಪ್ರಭುತ್ವ ಹಾಗೂ ಚಿತ್ರದೀಪ ನಾಲ್ಕು ಪತ್ರಿಕೆಗಳು ಏಕಕಾಲದಲ್ಲಿ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದವು.
ಪ.ಗೋ ಅವರು ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದು ಟೈಮ್ಸ್ ಆಫ್ ಇಂಡಿಯಾದಲ್ಲಿ ಸುಮಾರು ಏಳೂ ವರ್ಷ ಮಂಗಳೂರು ಪ್ರತಿನಿಧಿಯಾಗಿ ಕೆಲಸ ಮಾಡಿದ ಮೇಲೆ. 1994ರಲ್ಲಿ ವೃತ್ತಿಯಿಂದ ನಿವೃತ್ತರಾದರೂ ಅವರು ಕೊನೆಗಾಲದ ತನಕ ಅಂದರೆ 1997 ರವರೆಗೂ ಬೇರೆ ಬೇರೆ ಪತ್ರಿಕೆಗೆ ಅಂಕಣ ಬರಹಗಳ ಮೂಲಕ ಕ್ರಿಯಾಶೀಲರಾಗಿದ್ದರು.
ಪ.ಗೋ ಅವರು ಪತ್ರಕರ್ತರಾಗಿ ಸರಿಸುಮಾರು 42 ವರ್ಷಗಳ ಕಾಲ ದುಡಿದಿದ್ದಾರೆ. ಸ್ವಾತಂತ್ರ್ಯಾನಂತರ ವೃತ್ತಿ ಜೀವನ ಆರಂಭಿಸಿದ ಪ.ಗೋ ಕ್ರಮಿಸಿದ ಹಾದಿಯಲ್ಲಿ ಪತ್ರಿಕೋದ್ಯಮದ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಗುರುತಿಸಬಹುದು. 1955ರಲ್ಲಿ ಬೆಂಗಳೂರಲ್ಲಿ ವಿಶ್ವಕರ್ನಾಟಕಕ್ಕೆ ಕೆಲಸಕ್ಕೆ ಸೇರಿದಾಗ ತಿಂಗಳಿಗೆ 30 ರೂಪಾಯಿ ವೇತನ. ಅವರು ನಿವೃತ್ತಿ ಪಡೆದಾಗಲೂ ಅರೆಕಾಲಿಕ ಲೈನೇಜ್ ಪತ್ರಕರ್ತರಾಗಿಯೇ ಇದ್ದ ಕಾರಣ ವೇತನ ನಾಲ್ಕೈದು ಸಾವಿರ ಮೀರಿರಲಾರದು. ಈ ವೃತ್ತಿಯ ಅಥವಾ ಈ ವೃತ್ತಿಯನ್ನು ಮುನ್ನಡೆಸುವವರ ಮನೋಧರ್ಮವನ್ನು ಗಮನಿಸಿದರೆ ಅಚ್ಚರಿಯಾಗುವ ಸಂಗತಿಯೆಂದರೆ ಪ.ಗೋ ಹಗಲೂ ರಾತ್ರಿ ದುಡಿದ ದುಡಿಮೆಗೆ ಸಿಗುತ್ತಿದ್ದ ಲೈನೇಜ್ ಲೆಕ್ಕ ಹಾಕಿದರೆ ಅವರ ನಂತರ ನೇಮಕ ಮಾಡಿಕೊಂಡ ಅದೇ ಸಂಸ್ಥೆಯ ಪೂರ್ಣಾವಧಿ ಪತ್ರಕರ್ತರಿಗೆ ಕೊಡುತ್ತಿದ್ದ ವೇತನ ಪ.ಗೋ ಅವರ ನಾಲ್ಕು ತಿಂಗಳ ವೇತನವಾಗುತ್ತಿತ್ತು.
ಆದರೆ ಪ.ಗೋ ಲೈನೇಜ್ ಬಗ್ಗೆ ಎಂದೂ ತಗಾದೆ ಮಾಡಿದ್ದು ನನ್ನ ಅರಿವಿಗೆ ಬಂದಿಲ್ಲ ಮತ್ತು ಅವರು ಸರಿ ಸುಮಾರು 17 ವರ್ಷಗಳ ಕಾಲ ನನ್ನ ಒಡನಾಡಿಯಾಗಿದ್ದರೂ ಈ ವಿಚಾರವನ್ನು ಹಂಚಿಕೊಂಡಿಲ್ಲ.
ಪ.ಗೋ ಪತ್ರಿಕಾ ವೃತ್ತಿಯನ್ನು ತಪಸ್ಸಿನಂತೆ ನಿರ್ವಹಿಸಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಅದೇ ಮುಖ್ಯವಾಗಿದ್ದರೂ ಹೊಟ್ಟೆಬಾಕತನವನ್ನು ವೃತ್ತಿಯಲ್ಲಿ ತೋರಿಸಿಲ್ಲ. ಅವರು ಸೇರಿ ಬಿಟ್ಟು ಬಂದ ಸಂಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಕೊರತೆ ಮಾಡಬೇಕಾಗಿದ್ದ ಸಂಸ್ಥೆಗಳಾಗಿರಲಿಲ್ಲ. ಸಂಯುಕ್ತಕರ್ನಾಟಕ, ನವಭಾರತ, ಇಂಡಿಯನ್ ಎಕ್ಸ್ ಪ್ರೆಸ್, ಕನ್ನಡಪ್ರಭ, ಟೈಮ್ಸ್ ಆಫ್ ಡೆಕ್ಕನ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಯಾವುದೇ ಪತ್ರಿಕೆಯಾದರೂ ಪ.ಗೋ ಅವರ ಪುಟ್ಟಸಂಸಾರಕ್ಕೆ ಕೊರತೆಯಾಗುವಂಥ ವೇತನ ಕೊಡಬೇಕಾಗಿರಲಿಲ್ಲ. ಅವರೇ ಈ ವಿಚಾರಗಳನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರ ಕೊರಗು ಕುಟುಂಬ ಸಾಕುವುದಾಗಿರಲಿಲ್ಲ, ಸ್ವಾಭಿಮಾನ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಆದ್ದರಿಂದಲೇ ಅವರು ಮನಸ್ಸಿಗೆ ಹಿತವಲ್ಲದ ಕೆಲಸ ಮಾಡಲಾಗದೆ, ಜೀಹುಜೂರ್ ಎನ್ನಲಾಗದೆ ತಲೆಯೆತ್ತಿ ಬದುಕ ಬೇಕೆನ್ನುವ ಛಲಕ್ಕಾಗಿ ಬೆಕ್ಕು ಬಿಡಾರ ಬದಲಿಸುವಂತೆ ಪತ್ರಿಕೆಗಳನ್ನು ಬದಲಾಯಿಸಿಕೊಂಡು ಬಂದರು.
ಇದನ್ನು ಪ.ಗೋ ಸಂಸಾರವೂ ಅರ್ಥಮಾಡಿಕೊಂಡಿತ್ತು ಎನ್ನುವುದೇ ಬಹಳ ಮುಖ್ಯ. ಪತಿ ಸಾವಿತ್ರಿ, ಪುತ್ರರಾದ ಪಿ.ವಿಶ್ವೇಶ್ವರ, ಪಿ.ರಾಮಚಂದ್ರ ಪ.ಗೋ ಅವರ ಹೆಜ್ಜೆಗುರುತುಗಳನ್ನು ಹಿಂಬಾಲಿಸಿಕೊಂಡೇ ನಡೆದವರು. ವಿಶ್ವೇಶ್ವರ ಸೇನೆಯಲ್ಲಿದ್ದು ನಿವೃತ್ತಿ ಹೊಂದಿ ನಗರದ ಖಾಸಗಿ ವೈಧ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿ, ರಾಮಚಂದ್ರ ಸುರತ್ಕಲ್ ಎನ್ ಐ ಟಿಕೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕತಾರ್ ನಲ್ಲಿ ಉದ್ಯೋಗದಲ್ಲಿದ್ದಾರೆ.
ಪ.ಗೋ ಎನ್ನುವ ಪತ್ರಿಕೋದ್ಯಮದ ಸುದೀರ್ಘ ನಡೆಯ ದೈತ್ಯಪ್ರತಿಭೆಯ ನೆಲೆ ಮಂಗಳೂರಿನ ಲೋವರ ಮರೋಳಿಯ `ಕಾಟೇಜ್’ನಲ್ಲಿ. ಅದೇ ಪ.ಗೋ ಅವರ ವೃತ್ತಿ ಬದುಕಿನ ಮನೆ ಮತ್ತು ಶಾಲೆ, ನನ್ನಂಥ ಕಿರಿಯರಿಗೆ ಅದೇ ವೃತ್ತಿ ಜೀವನದ ಪ್ರಯೋಗಶಾಲೆ. ಅಲ್ಲೇ ನನ್ನ ಬದುಕಿನ ಹಲವಾರು ಹಗಲು-ರಾತ್ರಿಗಳು ಕಳೆದುಹೋಗಿವೆ.
(ಮುಂದುವರಿಯುವುದು)
ಚಿದಂಬರ ಬೈಕಂಪಾಡಿ
ಕರಾವಳಿ ಮೂಲದ ಪತ್ರಕರ್ತ ಚಿದಂಬರ ಬೈಕಂಪಾಡಿ. ಮುಂಗಾರು, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದಿದ್ದಾರೆ. ಕವಿಯಾಗಿ ಬೇಗುದಿ, ವಾಸ್ತವದ ಲೆಕ್ಕಾಚಾರ, ಕಪ್ಪು ಹುಡುಗ ಮೂರು ಕನವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತುಳು ಪ್ರೇಮಗೀತೆಗಳು ಇವರ ಧ್ವನಿ ಸುರುಳಿ. ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.