ಮಂಗಳೂರು : ಮಂಗಳೂರಿನಲ್ಲಿ ನಡೆಯುವ 19ನೇ ರಾಷ್ಟ್ರೀಯ ಫೆಡರೇಶನ್ ಕಪ್ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾನಿಲಯದ ವತಿಯಿಂದ 5 ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಯುವ ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಪ್ರತಿಭಾನ್ವೇಷನೆ ನಡೆಯುತ್ತಿದ್ದು, ಇಂಥ ಮಹತ್ವದ ಕ್ರೀಡಾಕೂಟಕ್ಕೆ ಯೆನೆಪೊಯ ಸಂಸ್ಥೆ ದೇಣಿಗೆಯನ್ನು ನೀಡಿ ಪ್ರೋತ್ಸಾಹಿಸಿದೆ.
ಯೆನೆಪೊಯ ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಕುಂಜ್ಞಿಯವರ ಪರವಾಗಿ ಸಂಸ್ಥೆಯ ಆಡಳಿತಾಧಿಕಾರಿಗಳು ಮಂಗಳಾ ಕ್ರೀಡಾಂಗಣದಲ್ಲಿ 5 ಲಕ್ಷ ರೂ. ಮೊತ್ತದ ದೇಣಿಗೆ ಚೆಕ್ ಅನ್ನು ಗುರುವಾರ ರಾಜ್ಯ ಆ್ಯತ್ಲೆಟಿಕ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ | ಜಿ.ಪರಮೇಶ್ವರ್ ಅವರ ಸಮ್ಮುಖದಲ್ಲಿ ರಾಜ್ಯದ ಯುವ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್ ಮಹಾಬಲ ಮಾರ್ಲ, ದ.ಕ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಶನ್ ಮಾಜಿ ಅಧ್ಯಕ್ಷ ಹಾಗೂ ಮೂಡ ಮಾಜಿ ಅಧ್ಯಕ್ಷ ತೇಜೋಮಯ, ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ಚೆಯರ್‌ಮೆನ್ ಸೋಮಶೇಖರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.