* ಒಮ್ಮೆ ಒಂದು ವಾಹನಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ..!
* ಕಿರಿದಾದ ಸೇತುವೆಯಲ್ಲಿ ಜನರ ನಿತ್ಯ ಗೋಳು
* 25 ವರ್ಷಗಳ ಹೋರಾಟಕ್ಕೆ ಸಲ್ಲದ ಬೆಲೆ
* ಶಿಥೀಲಗೊಂಡ ಸೇತುವೆ ಮೇಲೆ ಆನಗಳ್ಳಿ ಶಾಪಗ್ರಸ್ಥ ಜನರ ಸಂಚಾರ
ಕುಂದಾಪುರ: ಸುಮಾರು 800ಕ್ಕೂ ಅಧಿಕ ಮನೆ, 6 ಸಾವಿರ ಜನಸಂಖ್ಯೆ ಇರುವ ಇದೊಂದು ಪುಟ್ಟ ಗ್ರಾಮ, ಇಲ್ಲಿ ಜನಾನುಕೂಲಕ್ಕೆ ಬಹುತೇಕ ಎಲ್ಲವೂ ಇದೆ. ಆದರೇ ಕುಂದಾಪುರ ನಗರದಿಂದ ಊರಿಗೆ ಬರಲು ಊರಿನಿಂದ ನಗರಕ್ಕೆ ಸಂಪರ್ಕಿಸಲು ಬೇಕಾದ ಸಂಪರ್ಕ ಸೇತುವೆ ಮಾತ್ರ ಶಿಥಿಲಾವಸ್ಥೆ ತಲುಪುತ್ತಿದೆ. ಸುಮಾರು 25 ವರ್ಷಗಳ ಹೋರಾಟ ನಡೆದರೂ ಪುನರ್ನಿರ್ಮಾಣವಾಗದ ಕುಂದಾಪುರ ಆನಗಳ್ಳಿ ಸೇತುವೆಯ ಕುರಿತ ಒಂದು ಸ್ಟೋರಿಯಿಲ್ಲಿದೆ.
ಕುಂದಾಪುರದ ಸಂಗಮ್ ಜಂಕ್ಷನ್ ನಿಂದ ಬಸ್ರೂರಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸುವ ಈ ಪುರಾತನ ಸೇತುವೆ ಸಂಪೂರ್ಣ ಶಿಥಿಲಗೊಂದ್ದು ಸೇತುವೆಯ ಇಕ್ಕೆಲಗಳಲ್ಲಿ ಮಣ್ಣಿನ ಸವಕಳಿ ತಪ್ಪಿಸಲು ಹಾಕಿದ ಕಲ್ಲುಗಳು ಜಾರಿ ನದಿಗೆ ಸೇರುತ್ತಿದೆ. ಆನಗಳ್ಳಿ ನೂತನ ಸೇತುವೆಯ ಕುರಿತು ಹಲವು ವರ್ಷಗಳ ಬೇಡಿಕೆಯಿದ್ದರೂ ಅದು ನೆನೆಗುದಿಗೆ ಬಿದ್ದಿದ್ದು ಮಾತ್ರ ವಿಪರ್ಯಾಸವೇ ಸರಿ. ಇಲ್ಲಿ ಸಂಚರಿಸುವ ಜನರ ಸಂಕಷ್ಟ ಅವರಿಗೆ ಗೊತ್ತು.
ಕಿರಿದಾದ ಸೇತುವೆ.!: ನಡೆಯುವ ದಾರಿ ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಮಾದರಿಯಲ್ಲಿ ನಿರ್ಮಾಣಗೊಂಡ ಈ ಸೇತುವೆ ೬ ಅಡಿ ಅಗಲವಿದ್ದು ಅತ್ಯಂತ ಕಿರಿದಾಗಿದೆ. ಏಕಕಾಲದಲ್ಲಿ ಒಂದು ರಿಕ್ಷಾ,ಅಥವಾ ಕಾರು ಚಲಿಸಿದರೆ ಎದುರಿನಿಂದ ಬರುವ ಉಳಿದ ವಾಹನಗಳು ಇನ್ನೊಂದು ಕಡೆ ಕಾಯಬೇಕಾಗುತ್ತದೆ. ಒಮ್ಮೆ ಒಂದು ವಾಹನ ಮಾತ್ರ ಸಂಚರಿಸಲು ಯೋಗ್ಯವಾದ ಈ ಸೇತುವೆ ಮೇಲೆ ಸಂಚರಿಸಬೇಕಾದರೆ ಕಾಯುವಷ್ಟು ತಾಳ್ಮೆ ಮಾತ್ರ ಖಂಡಿತ ಬೇಕು. ಅಲ್ಲದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಂತೂ ಜನರು ಪರಿತಪಿಸುವ ಪಾಡು ಇಂದು ನಿನ್ನೆಯದಲ್ಲ. ಕಿರಿದಾದ ಈ ಸೇತುವೆಯಾದ ಕಾರಣದಿಂದಾಗಿ ಬೆಳಿಗ್ಗೆ ಶಾಲೆ-ಕಾಲೇಜಿಗೆ ತೆರಳಬೇಕಾದ ವಾಹನಗಳು ಈ ಸ್ಥಳದಲ್ಲಿ ಸಂಚರಿಸಲು ಕಷ್ಟದಾಯಕವಾಗಿರುವುದರಿಂದ ಬಸ್ರೂರು- ಕುಂದಾಪುರ ಮಾರ್ಗವಾಗಿ ಸುತ್ತು ಹಾಕಿ ತೆರಳಬೇಕಾಗುತ್ತಿದೆ. ಇದರಿಂದ ೭ ಕಿ.ಮೀ. ಸುತ್ತಿ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ವಾಹನ ಸವಾರರದ್ದು. ಎದುರಿನಿಂದ ವಾಹನ ಬಂದರೆ ತುರ್ತು ಪರಿಸ್ಥಿತಿಯಲ್ಲೂ ಕಾಯಲೇ ಬೇಕಾದ ಅನಿವಾರ್ಯತೆ ಇದೆ.
ಸೇತುವೆ ಉಪಯೋಗವೇನು?: ಬಸ್ರೂರು ಮಾರ್ಗವಾಗಿ ಆನಗಳ್ಳಿ ಮೂಲಕ ಕುಂದಾಪುರ ಪೇಟೆ ಸಂಪರ್ಕಿಸಲು ಅತ್ಯಂತ ಹತ್ತಿರದ ಸಂಪರ್ಕ ಸೇತುವೆಯಾಗಿರುವುದರಿಂದ ನಿತ್ಯ ಸಾವಿರಾರು ಜನರಿಗೆ ಅನುಕೂಲ, ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣವನ್ನು ಅನಾಯಾಸವಾಗಿ ಸೇರಬಹುದು, ಇನ್ನು ಸುತ್ತು ಹಾಕಿ ಹೋಗುವ ಅಗತ್ಯವಿಲ್ಲ, ಮುಖ್ಯವಾಗಿ ಆನಗಳ್ಳಿ ಪಂಚಾಯತ್ ಕಿರು ಪಂಚಾಯತ್ ಆಗಿದ್ದು ಇಲ್ಲಿಗೆ ಆರ್ಥಿಕ ಸಂಪನ್ಮೂಲ ಕಡಿಮೆ ಬರುತ್ತೆ. ಸೇತುವೆ ನಿರ್ಮಾಣಗೊಂಡು ಪಂಚಾಯತ್ ವ್ಯಾಪ್ತಿಯಲ್ಲಿ ವಾಣಿಜ್ಯ ಕೇಂದ್ರಗಳು ನಿರ್ಮಾಣಗೊಂಡಲ್ಲಿ ಗ್ರಾಮವೂ ಬೆಳೆಯುವ ಜೊತೆಗೆ ಪಂಚಾಯತಿಗೂ ಆರ್ಥಿಕ ಲಾಭ ಸಿಗುತ್ತೆ, ಈ ಮೂಲಕ ಗ್ರಾಮದ ಅಭಿವೃದ್ಧಿಯೂ ಆಗುತ್ತೆ. ಈ ಎಲ್ಲಾ ಆನಗಳ್ಳಿ ಸೇತುವೆ ನಿರ್ಮಾಣದ ಕುರಿತು ಪರಿಸರದ ಜನರು ಹಲವಾರು ಬಾರಿ ಹೋರಾಟ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವೂ ಆಗಿಲ್ಲ.
ಸೇತುವೆ ಬಗ್ಗೆ ಒಂದಿಷ್ಟು: 1990ರಲ್ಲಿ ಐ.ಎಂ. ಜಯರಾಂ ಶೆಟ್ಟಿಯವರು ಉಡುಪಿ ಸಂಸದರಾಗಿದ್ದ ಕಾಲ. ಅಂದಿನ ಬೋಪಾಲ್ ರಾಜ್ಯಸಭಾ ಸದಸ್ಯರಾಗಿದ್ದ ಮೇಬಲ್ ರೆಬೆಲ್ಲೋ ಅವರು ಕಾರ್ಯಕ್ರಮವೊಂದಕ್ಕೆ ಈ ಭಾಗಕ್ಕೆ ಬಂದಿದ್ದಾಗ ಈ ಸೇತುವೆಯ ಅವ್ಯವಸ್ಥೆ ಕಂಡು ತನ್ನ ಅನುದಾನದಲ್ಲಿ 1 ಕೋಟಿ ನೀಡುವ ಭರವಸೆಯಿತ್ತರು, ಆದರೇ ರಾಜ್ಯಸಭಾ ಸದಸ್ಯರು ಅವರು ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ತಮ್ಮ ಅನುದಾನ ನೀಡುವುದರಲ್ಲಿ ತಾಂತ್ರಿಕ ಅಡಚಣೆಯುಂಟಾಗಿ ಈ ವಿಚಾರ ಅಲ್ಲಿಗೆ ನಿಂತಿತು. ಬಳಿಕ ಸೊರಕೆಯವರು ಸಂಸದರಾದ ಮೆಲೆಯೂ ನಬಾರ್ಡಿನಲ್ಲಿ ಪಡೆಯಲು ಕೆಲವು ಅಡಚಣೆಯುಂಟಾಗಿತ್ತು. ಬಳಿಕ ಈ ಸೇತುವೆಯಿಂದ ಮೊದಲಗೊಂಡು 1 ಕಿಮೀ. ದೂರವನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸಿ 4 ಕೋಟಿ ಅನುದಾನ ಇಡಲಾಗಿತ್ತು. ಆದರೇ ಅದರಲ್ಲು ಸಮಸ್ಯೆಗಳಾದವು. ನಂತರದಲ್ಲಿ 1 ಕೋಟಿ 90 ಲಕ್ಷ ವೆಚ್ಚದ ಪ್ರಸ್ತಾವನೆಯಲ್ಲಿ ಟೆಂಡರ್ ಕರೆದರೂ ಕೂಡ ಅನುದಾನ ಕಡಿಮೆಯಾದ್ದರಿಂದ ಯಾರೂ ಟೆಂಡರ್ ಹಾಕಿಲ್ಲ.
ಕೆ. ಜಯಪ್ರಕಾಶ ಹೆಗ್ಗಡೆಯವರು ರೀ-ಎಸ್ಟಿಮೇಟ್ ಮಾಡಿ 8 ಕೋಟಿ 70 ಲಕ್ಷಕ್ಕೆ ಪ್ರಸ್ತಾವನೆ ಮಾಡಿದಾಗ 5 ಕೋಟಿ 57 ಲಕ್ಷ ಮಂಜೂರಾಗಿತ್ತಾದರೂ ಅಷ್ಟೂ ಹಣ ಸಾಂಕ್ಷನ್ ಆಗದ ಕಾರಣ ಆ ವಿಚಾರವೂ ಅಲ್ಲಿಗೆ ನಿಂತಿತ್ತು. ಇದೇ ಸಮಯದಲ್ಲಿ ಲೋಕಸಭಾ ಚುನಾವಣೆಯೂ ಬಂದಿತ್ತು.
ತನ್ನ ಎಲ್ಲಾ ಶಾಸಕತ್ವದ ಅವಧಿಯಲ್ಲೂ ಈ ಸೇತುವೆ ನಿರ್ಮಾಣದ ವಿಚಾರದಲ್ಲಿ ಧ್ವನಿಯೆತ್ತಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೂ ಕಳೆದ ಅದಿವೇಶನದಲ್ಲಿ ಸೇತುವೆ ನಿರ್ಮಾಣದ ಕಾರ್ಯದ ಬಗ್ಗೆ ಸಂಬಂದಪಟ್ಟ ಸಚಿವರ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದ್ದು ರಾಜ್ಯದೆಲ್ಲೆಡೆ ಹಲವು ಸೇತುವೆ ನಿರ್ಮಾಣವಾಗುತ್ತಿದ್ದು ಅದರಲ್ಲಿ ಆನಗಳ್ಳಿ ಸೇತುವೆ ನಿರ್ಮಾಣವೂ ಆಗಲಿದೆ ಎಂಬ ಭರವಸೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.
ಒಟ್ಟಿನಲ್ಲಿ ಆನಗಳ್ಳಿ ಸೇತುವೆ ನಿರ್ಮಾಣದ ಬಗೆಗಿನ ಹಲವು ವರ್ಷಗಳ ಜನರ ಕೂಗು ಇನ್ನಾದರೂ ನಮ್ಮ ಜನಪ್ರತಿನಿಧಿಗಳಿಗೆ ಕೇಳಿಸಲಿ. ಈ ಶಿಥಿಲಗೊಂಡ ಕಿರುಸೇತುವೆಗೆ ಮುಕ್ತಿಕಾಣಿಸಿ ನೂತನ ಸೇತುವೆ ನಿರ್ಮಿಸಿದಲ್ಲಿ ಜನರ ಬವಣೆ ನಿಲ್ಲಲಿದೆ.
ವರದಿ- ಯೋಗೀಶ್ ಕುಂಭಾಸಿ












