ಚಿಂತಾಮಣಿ: ತಾಲೂಕಿನ ಮುರಗಮಲ್ಲಾ ಗ್ರಾಮದ ಕುಡಿಯವ ನೀರಿನ ಬಾವಿಗೆ ದುಷ್ಕರ್ಮಿಗಳು ವಾಮಾಚಾರ ಮಾಡುವ ಮೂಲಕ ಬಾವಿ ನೀರನ್ನು ಕುಡಿಯದಂತೆ ಕಲುಷಿತ ಮಾಡಿದ್ದಾರೆ ಎಂದು ದೂರಿ ಗ್ರಾಮಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಸ್ ಮತ್ತಿತರ ವಾಹನಗಳು ಗ್ರಾಮದಿಂದ ಹೊರ ಹೊಗದಂತೆ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಗ್ರಾಮದ ಆಲಿಕುಂಟೆ ಕೆರೆಯ ಅಂಗಳದಲ್ಲಿ ಕುಡಿಯುವ ನೀರಿನ ಬಾವಿ ಇದ್ದು, ಆ ಬಾವಿಯ ನೀರನ್ನು ಮುರಗಮಲ್ಲಾ ಬೆಟ್ಟದಲ್ಲಿ ಕಲ್ಲುಬಂಡೆ ಕೆಲಸಕ್ಕೆ ಬರುವ ನೂರಾರು ಮಂದಿ ಕೂಲಿಯಾಳುಗಳು,
ಕಲ್ಲು ಮತ್ತು ಬಂಡೆಗಳನ್ನು ಸಾಗಿಸಲು ಬರುವ ವಿವಿಧ ವಾಹನಗಳ ಮಾಲೀಕರು, ಚಾಲಕರು ಹಾಗೂ ಮುರಗ ಮಲ್ಲಾ ಸುತ್ತಮುತ್ತಲಿನ ಹಲವು ಗ್ರಾಮಸ್ಥರು ಸಹ ಇದೇ ಬಾವಿಯ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ.
ಅಂತಹ ಕುಡಿಯವ ನೀರಿನ ಬಾವಿಯೊಳಕ್ಕೆ ಯಾರೋ ಕಿಡಿಗೇಡಿಗಳು ಸೆಂಟ್ ಬಾಟಲುಗಳು, ಹೂಗಳು, ನಿಂಬೆಹಣ್ಣುಗಳ ಹೋಳುಗಳು, ಚಿಕ್ಕ ಚಿಕ್ಕ ಮತ್ತು ದೊಡ್ಡದಾದ ಮಣ್ಣಿನ ದೀಪಗಳು, ಪೂಜೆ ಮಾಡಿರುವ ಹಸಿರು ಬಣ್ಣದ ಬಟ್ಟೆಗಳು, ಅನ್ನ, ಚಪಾತಿ ಮತ್ತಿತರರ ಆಹಾರ ಮತ್ತು ಮನುಷ್ಯನ ಆಕಾರದ ಬೊಂಬೆ ಮಾಡಿ ಅದಕ್ಕೆ ತಲೆಕೂದಲು ಅಳವಡಿಸಿ ದೇಹಕ್ಕೆ ಕಬ್ಬಿಣದ ಮೊಳೆಗಳನ್ನು ಚುಚ್ಚಿರುವ ಎಲ್ಲವನ್ನು ಬಟ್ಟೆಯಲ್ಲಿ ಕಟ್ಟಿಹಾಕಿ ಬಾವಿಗೆ ಎಸೆದಿದ್ದಾರೆ. ನಿನ್ನೆ ಬೆಳಗ್ಗೆ ಕಲ್ಲುಬಂಡೆ ಕೆಲಸ ಮಾಡುವ ಕೂಲಿಯಾಳುಗಳು ಕುಡಿಯವ ನೀರಿಗಾಗಿ ಬಾವಿಯಲ್ಲಿದ್ದ ನೀರನ್ನು ಹೊರ ತೆಗೆದಾಗ ನೀರು ಕಲುಷಿತಗೊಂಡಿರುವುದು ಹಾಗೂ ನೀರು ಸೆಂಟ್ ವಾಸನೆ ಬರುತ್ತಿರುವುದನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಅಗಮಿಸಿದ ಗ್ರಾಮಸ್ಥರು ಬಾವಿಯ ತಪಾಸಣೆ ನಡೆಸಿದಾಗ ಈ ವಸ್ತುಗಳು ಪತ್ತೆಯಾಗಿವೆ.
ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಹಾಗೂ ಅಮ್ಮಾಜಾನ್ ಬಾವಾಜಾನ್ ದರ್ಗಾ ಕಮಿಟಿಗೆ ಮನವಿ ಸಲ್ಲಿಸಿ ಕೂಡಲೇ ಕುಡಿಯುವ ನೀರಿನ ಬಾವಿ ಸ್ವಚ್ಛಗೊಳಿಸುವಂತೆ ಕೋರಿದ್ದಲ್ಲದೆ ಇತ್ತೀಚೆಗೆ ಈ ಬಾವಿಗೆ ಕಳೆದ ಎರಡು ವರ್ಷಗಳ ಹಿಂದೆ ಸಹ ಇದೇರೀತಿ ವಾಮಾಚಾರ ಮಾಡಿದ್ದರು. ಪದೇ ಪದೇ ಇದು ಪುನರಾವರ್ತನೆಯಾಗುತ್ತಿದ್ದು, ಇದನ್ನು ತಡೆಯುವಂತೆ ಅಗ್ರಹಿಸಿ ಬೀದಿಗೆ ಇಳಿದು ಪ್ರತಿಭಟಿಸಿದರು. ಕೆಲ ಯುವಕರು ಸೇರಿದಂತೆ ಮಹಿಳೆಯರು ಸಹ ಬೀದಿಗಿಳಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ವಾಹನಗಳ ಓಡಾಟವನ್ನು ಸ್ಥಗಿತಗೊಳಿಲಸು ಎಲ್ಲಾ ಮುಖ್ಯ ರಸ್ತೆಗಳಿಗೆ ಕಲ್ಲುಗಳ ಅಡ್ಡಹಾಕಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದ್ದಲ್ಲದೆ ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಗುಂಪೊಂದು ಪೊಲೀಸ್ ಹೊರಠಾಣೆಗೆ ಮುತ್ತಿಗೆ ಹಾಕಿದ್ದರಿಂದ ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಯಿತು.
ಡಿವೈಎಸ್‌ಪಿ ಸಣ್ಣತಿಮ್ಮಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್, ಕೆಂಚಾರ್ಲಗಹಳ್ಳಿ ಪಿಎಸ್‌ಐ ರಾಜಕುಂಟೆ ತೆರಳಿ ಪ್ರತಿಭಟನೆ ನಿರತ ಮುಖಂಡರಾದ ನಾಗರಾಜ್, ಶಾಂತಮ್ಮ, ಅಶ್ವಥರೆಡ್ಡಿ ನೇತೃತ್ವದ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು ಪ್ರಯೋಜನವಾಗಲಿಲ್ಲ.
ಮುರಗಮಲ್ಲಾ ಗ್ರಾಮದಲ್ಲಿರುವ ಅಮ್ಮಾಜಾನ್ ಬಾವಾಜಾನ್ ದರ್ಗಾಕ್ಕೆ ಪ್ರತಿ ಅಮಾವಸ್ಯೆ ಮತ್ತು ಹುಣ್ಣಿಮೆ ಹಾಗೂ ವಿವಿಧ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಭಕ್ತರು ಬರುತ್ತಾರೆ. ಬೇರೆ ಬೇರೆ ಕಡೆಯಿಂದ ಬರುವ ಯಾತ್ರಾರ್ಥಿಗಳಲ್ಲಿ ಕೆಲವರು ಇಂತಹ ವಾಮಚಾರವನ್ನು ಮಾಡುತ್ತಿರುವುದರಿಂದ ಗ್ರಾಮದಲ್ಲಿ ಆಶಾಂತಿ ನೆಲೆಸಲು ಕಾರಣವಾಗಿದ್ದು, ಇಂತಹ ಸಮಯದಲ್ಲಿ ಗ್ರಾಮದಲ್ಲಿ ಗಸ್ತಿನ ಪಹರೆಯನ್ನು ಹೆಚ್ಚಿಸುವಲ್ಲಿ ಪೊಲೀಸರು ವಿಫಲರಾಗಿದ್ದರೆ ಎಂದು ಪ್ರತಿಭಟನಾಕಾರರು ದೂರಿದರು.
