ಪುತ್ತೂರು,ಮಾರ್ಚ್.19: ಡ್ಯಾನ್ಸನ್ ಎಂಬಾತನಿಂದ ಅಪಹರಣಕ್ಕೊಳಗಾಗಿದ್ದರು ಎನ್ನಲಾದ ಕಲ್ಲಾರೆಯ ಗಿರಿಧರ್ ಭಟ್ ಎಂಬವರ ಪತ್ನಿ ಕೀರ್ತಿಕಾ(24) ತಮಿಳುನಾಡಿನ ವಿಲ್ಲಾಪುರಂನ ಅನ್ಬುಜ್ಯೋತಿ ಆಶ್ರಮದಲ್ಲಿರುವುದನ್ನು ಪತ್ತೆಹಚ್ಚಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ತನ್ನ ಗಂಡ ಗಿರಿಧರ್ ಭಟ್ ಜೊತೆ ತೆರಳುವಂತೆ ಹೇಳಿತು. ಆದರೆ ಕೀರ್ತಿಕಾ ಪುನ: ತಾನಿದ್ದ ಆಶ್ರಮದಲ್ಲೇ ಇರಲು ಅನುಮತಿ ನೀಡುವಂತೆ ಕೋರಿದ್ದರು. ತನ್ನ ಪತಿ ಮತ್ತು ಅತ್ತೆ ತನಗೆ ನಿರಂತರ ಮಾನಸಿಕ ಕಿರುಕುಳ ನೀಡಿದ್ದು, ತನ್ನ ಮತ್ತು ಗಿರಿಧರ್ ಭಟ್ ದಾಂಪತ್ಯ ಬದುಕು ಚೆನ್ನಾಗಿರಲಿಲ್ಲ ಎಂದು ಕೀರ್ತಿಕಾ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಕೀರ್ತಿಕಾರ ಕೋರಿಕೆಯನ್ನು ಮನ್ನಿಸಿದ ನ್ಯಾಯಾಲಯ ಆಕೆಯ ಬಯಕೆಯಂತೆ ಆಶ್ರಮಕ್ಕೆ ತೆರಳುವಂತೆ ತಿಳಿಸುವುದರೊಂದಿಗೆ ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕರಣಕ್ಕೆ ಒಂದು ಹಂತ ತಲುಪಿದಂತಾಗಿದೆ.
ಕೀರ್ತಿಕಾಳನ್ನು ಆಕೆಯನ್ನು ಅಪಹರಿಸಿದ್ದ ಡ್ಯಾನ್ಸನ್ ಮತಾಂತರ ಮಾಡಿದ್ದಾನೆ ಎಂಬ ಗಿರಿಧರ್ ಭಟ್ ಆರೋಪವನ್ನು ಆಕೆ ತಳ್ಳಿ ಹಾಕಿದ್ದಾರೆ. ತನಗೆ ಯಾರೂ ಬಲವಂತದ ಮತಾಂತರ ವಾಗಲಿ, ಅಪಹರಣವಾಗಲಿ ಮಾಡಿಲ್ಲ. ತನ್ನ ಇಚ್ಛೆಯಂತೆ ಬದುಕುತ್ತಿರುವುದಾಗಿ ಕೀರ್ತಿಕಾ ಸ್ಪಷ್ಟಪಡಿಸುವುದರೊಂದಿಗೆ ಅವರನ್ನು ಬಲವಂತವಾಗಿ ಮತಾಂತರ ಗೈಯಲಾಗಿದೆ ಎಂಬ ಆರೋಪಗಳಿಗೂ ಉತ್ತರ ಸಿಕ್ಕಂತಾಗಿದೆ.
ಪುತ್ತೂರು ಇನ್ಸ್ ಸ್ಪೆಕ್ಟರ್ ಬಿ.ಕೆ.ಮಂಜಯ್ಯ ಕೀರ್ತಿಕಾರನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪುತ್ತೂರು ನ್ಯಾಯಾಲಯಕ್ಕೆ ತನ್ನ ಗೆಳೆಯನ ಜತೆ ಹಾಜರಾಗಲು ಬಂದ ಡೆನ್ಸನ್ ನ್ಯಾಯಾಲಯ ಆವರಣದಿಂದಲೇ ಕಾಣೆಯಾಗಿದ್ದ. ಆತನನ್ನು ಗಿರಿಧರ ಭಟ್ ಮತ್ತು ಕೀರ್ತಿಕಾಳ ತಂದೆ ನಿತ್ಯಾನಂದ ಅಪಹರಿಸಿದ್ದಾರೆ ಎಂದು ಜೋಸೆಫ್ ಎಂಬವರು ದೂರು ನೀಡಿದ್ದರು.
ಡೆನ್ಸನ್ ತಾಯಿ ತನ್ನ ಮಗನ ಕಣ್ಮರೆ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು. ಇದಾದ 2 ವಾರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ತನ್ನನ್ನು ಯಾರೂ ಅಪಹರಿಸಿಲ್ಲ ಹೇಳಿಕೆ ನೀಡಿದ್ದ ಎಂಬುದನ್ನು ಸ್ಮರಿಸಬಹುದಾಗಿದೆ.
