ಕರ್ನಾಟಕ

ಯುಗಾದಿ ಹಿಂದೂ ಧರ್ಮದ ಪರಂಪರೆಗಳ ಪ್ರಾರಂಭ ದಿನ

Pinterest LinkedIn Tumblr

kdec17lead-ab1

ಇಲ್ನೋಡಿ, ಈ ಮಾವಿನ ಮರಕ್ಕೆ ಕಸ್ತ್ರಿ (ಮಾವಿನ ಹೂ) ಬಿಟ್ಟಿದೆ…’ ಜಗತ್ತಿನ ಅತ್ಯದ್ಭುತವನ್ನು ಕಂಡವಳಂತೇ ಅಮ್ಮ ಧ್ವನಿ ಎತ್ತರಿಸಿ ಅಪ್ಪನನ್ನು ಕರೆಯುತ್ತಿದ್ದಳು. ತೋಟದ ಇನ್ನೊಂದು ಬದಿಯಲ್ಲಿ ಯಾವುದೋ ಕೆಲಸದಲ್ಲಿ ನಿರತನಾಗಿರುತ್ತಿದ್ದ ಅಪ್ಪನೂ ಅದನ್ನು ಅರ್ಧಕ್ಕೆ ನಿಲ್ಲಿಸಿ ಕೊಪ್ಪರಿಗೆ ನಿಧಿ ಸಿಕ್ಕವನಂತೇ ‘ಎಲ್ಲಿ… ಎಲ್ಲಿ…?’ ಎನ್ನುತ್ತಾ ಅತ್ತ ಓಡುತ್ತಿದ್ದ.

ಮುಂದಿನ ಹತ್ತರಿಂದ ಹದಿನೈದು ನಿಮಿಷ ಅಷ್ಟೆತ್ತರದ ಮಾವಿನ ಮರದ ಯಾವುದೋ ಕೊಂಬೆಯ ಯಾವುದೋ ತುದಿಯ ಎಲೆಮರೆಯಿಂದ ಇಣುಕುತ್ತಿದ್ದ ಹೂವನ್ನು ಅಪ್ಪನಿಗೆ ತೋರಿಸುವ ಸರ್ಕಸ್‌ಗೆ ಮೀಸಲು. ಅಂತೂ ಇಂತೂ ಹೂವು ಕಂಡಿದ್ದೇ ಮಕರಜ್ಯೋತಿ ದರ್ಶನ ದಿಂದ ಪುಲಕಿತನಾದ ಅಯ್ಯಪ್ಪನ ಭಕ್ತನಂತೇ ‘ಹಾ… ಹಾ… ಕಾಣ್ತು’ ಎನ್ನುತ್ತಾ ಧನ್ಯಭಾವದಿಂದ ಮರಳುತ್ತಿದ್ದ.

ಅಷ್ಟರಲ್ಲಿಯೇ ಅಮ್ಮನಿಗೆ ಮತ್ತೊಂದು ಅನುಮಾನ. ‘ಅಲ್ಲಾ ಮಾವಿನ ಕಸ್ತ್ರಿ ಬಿಡ್ತು. ಬಿಸಿಲೂ ಜೋರಾಗ್ತಿದೆ. ಯುಗಾದಿ ಹತ್ರಾನೇ ಬಂತೋ ಹೇಗೆ?’ ಈ ಅನುಮಾನದ ನಿವಾರಣೆಯ ಹೊಣೆ ಹೊತ್ತ ಅಪ್ಪ ‘ಹೌದೇನೋ ನೋಡ್ತೇನೆ ಇರು’ ಎನ್ನುತ್ತಾ ಹಣೆಯ ಮೇಲೆ ಮೂಡಿದ್ದ ಬೆವರ ಸಾಲುಗಳನ್ನು ತೋರುಬೆರಳಲ್ಲಿ ಒರಿಸಿ ಕೊಂಡು ಒಳಗೆ ಹೋಗಿ ಪಂಚಾಂಗ ತಂದು ಜಗುಲಿ ಮೇಲಿನ ಹಳೆ ಮಂಚ ದಲ್ಲಿ ಕಿಟಕಿ ಪಕ್ಕದ ಬೆಳಕಲ್ಲಿ ಕೂತು ಪರಿಶೀಲನೆಗೆ ತೊಡಗುತ್ತಿದ್ದ. (ದಿನದರ್ಶಿಕೆ ಇದ್ದರೂ ಅಪ್ಪನಿಗೆ ಅದರ ಮೇಲೆ ಯಾಕೋ ಅಷ್ಟೊಂದು ನಂಬಿಕೆ ಇರಲಿಲ್ಲ).

–ಆಡಿದ ಮಾತು, ಸಮಯ ಕೊಂಚ ಆ ಕಡೆ ಈ ಕಡೆ ಆಗಿರಬಹುದು. ಆದರೆ ಪ್ರತಿವರ್ಷ ನಮ್ಮ ಮನೆಗೆ ಯುಗಾದಿ ತನ್ನ ಬರುವಿಕೆಯ ಸುದ್ದಿ ಮುಟ್ಟಿಸುತ್ತಿದ್ದುದು ಹೀಗೆಯೇ. ಅಮ್ಮನ ಧ್ವನಿಯಲ್ಲಿನ ಆ ಸೋಜಿಗಬೆರೆತ ಸಂಭ್ರಮ ನನ್ನ ಕಿವಿಯಲ್ಲಿ ಅನುಗಾಲದ ರಿಂಗಣವಾಗಿ ಹಾಗೇ ಕೂತುಬಿಟ್ಟಿದೆ. ಅಪ್ಪ ಹಣೆ ಮೇಲಿನ ಬೆವರ ಒರೆಸಿ ಕೊಂಡು ಪಂಚಾಂಗ ಎದುರಿಟ್ಟುಕೊಂಡು ಕೂಡುತ್ತಿದ್ದ ಚಿತ್ರ ಮನದ ಗ್ಯಾಲರಿಯಲ್ಲಿ ಎಂದೂ ಕಳಚಿಡಲಾಗದ ಸ್ಥಿರಚಿತ್ರ ವಾಗಿ ಅಚ್ಚೊತ್ತಿದೆ.

ಇವಿಷ್ಟೇ ಅಲ್ಲ, ಅಂಗಳದ ರಾಶಿ ರಾಶಿ ತರಗೆಲೆ ಗುಡಿಸುತ್ತಾ ದಣಿದು ‘ಥೋ, ಎಷ್ಟು ಕಸ..’ ಎಂದು ಅಮ್ಮ ಗೊಣಗುವಾಗ ಅಪ್ಪ ‘ಇನ್ನೇನು ಯುಗಾದಿ ಬಂತಲ್ಲ, ಮರ ಚಿಗುರಿ ಎಲೆ ಉದುರುವುದು ನಿಲ್ತದೆ ಬಿಡು’ ಎಂದು ಸಂತೈಸುತ್ತಿದ್ದುದು, ಕೆಲಸಕ್ಕೆ ಬಂದ ಭಾಗಿ ಸಿದ್ದಿ ಸಂಜೆ ಕುಕ್ಕರು ಗಾಲಲ್ಲಿ ಕೂತು ಸೊಂಟದ ಕೆಸರು ಸಂಚಿಯಿಂದ ಅಡಿಕೆ ಹೋಳು ತೆಗೆದು ಬಾಯೊಳಗೆ ಒಗೆದುಕೊಂಡು ‘ಒಡೆಯಾ ಉಗಾದಿ ಯಾವಾಗ ಬತ್ತದ್ರಾ?’ ಎಂದು ಕೇಳುತ್ತಿದ್ದುದು…

ಹೀಗೆ ಯುಗಾದಿಯೆಂದರೆ ನನ್ನ ಪಾಲಿಗೆ ಬರೀ ಹಿಂದು ಧರ್ಮದ ಸನಾತನ ಸಂಪ್ರದಾಯದ ಷೋಕೇಸಿನಂತಹ ಒಣ ಆಚರಣೆಯಷ್ಟೇ ಅಲ್ಲವೇ ಅಲ್ಲ. ಮಾವಿನ ಚಿಗುರು, ಅಪ್ಪನ ಬೆವರು, ಅಮ್ಮನ ದಣಿವು, ಭಾಗಿ ಸಿದ್ದಿಯ ಕುಕ್ಕರು ಗಾಲ ಕುತೂಹಲ ಎಲ್ಲವೂ ಸೇರಿದ, ಇಂದಿಗೂ ತಾಕಿದ ತಾಜಾ ಸಂಭ್ರಮ.

ಬೇರೆ ಯಾವುದೇ ಹಬ್ಬಕ್ಕೂ ಇರದ ಒಂದು ವಿಶಿಷ್ಟ ಗುಣ ಯುಗಾದಿಗಿದೆ. ಇದು ಬರೀ ಮನುಷ್ಯ ಮಾತ್ರರು ಆಚರಿಸಿ ಸಂಭ್ರಮಿಸುವ ಹಬ್ಬವಷ್ಟೇ ಅಲ್ಲ. ನಿಸರ್ಗ ಸಹಜವಾಗಿ ‘ಆಗುವ’ ಹಬ್ಬವೂ ಹೌದು. ಅಂದರೆ ಯುಗಾದಿ ಪ್ರಕೃತಿಯೂ ಆಚರಿಸಿಕೊಳ್ಳುವ ಹಬ್ಬ. ಶಿಶಿರನ ಚಳಿಯಪ್ಪುಗೆಯ ಅಮಲಲ್ಲಿ ಎಲೆಯುದುರಿಸಿ  ಬೆತ್ತಲಾದ ಪ್ರಕೃತಿ, ವಸಂತನ ಬೆಚ್ಚನೆಯ ನೇವರಿಕೆಯಲ್ಲಿ ಚಿಗಿತು ಕೊಳ್ಳುತ್ತದೆ. ಸುಳಿಯೆಲೆಯಲ್ಲಿ ಕೆಂಪಾಗಿ ನಾಚಿಕೊಳ್ಳುತ್ತಲೇ ಬಿಸಿಲ ಗಾಳಿಗೆ ಮೈಯೊಡ್ಡುತ್ತವೆ. ಹೀಗೆ ಹಳೆಯದನ್ನು ಕೊಡವಿ ಚಿಗುರುವ ಹೊಸತನದ ಸಂಭ್ರಮ ಯುಗಾದಿಯ ಆಶಯ ಪ್ರಕೃತಿಯಲ್ಲಿನ ಚಲನೆಯ ಪ್ರತೀಕವೂ ಹೌದು.

ಆದ್ದರಿಂದಲೇ ಪ್ರಕೃತಿಯೊಂದಿಗೆ ಕಳ್ಳುಬಳ್ಳಿಯ ಸಂಬಂಧ ಹೊಂದಿರುವ ಗ್ರಾಮೀಣರಿಗೆ ಯುಗಾದಿಯ ಬರುವಿನ ಅರಿವಾಗುವುದು ಪಂಚಾಂಗ– ದಿನದರ್ಶಿಕೆಗಳಿ ಗಿಂತ ಮೊದಲು ಮಾವಿನ ಹೂವಿನ ಮೂಲಕ. ಹೀಗೆ ಸುತ್ತಲಿನ ಪರಿಸರವೇ ಅವರನ್ನು ಹಬ್ಬಕ್ಕೆ ಆಹ್ವಾನಿಸುತ್ತದೆ. ಮಾವಿನ ತಳಿರನ್ನು ತಂದು ತನ್ನ ಮನೆಯನ್ನು ಸಿಂಗರಿಸಿ ಕೊಳ್ಳುವ ಮೂಲಕ ಮನುಷ್ಯ ಆ ಸಂಭ್ರಮದಲ್ಲಿ ಭಾಗಿಯಾಗುತ್ತಾನೆ. ಈ ‘ನಿಸರ್ಗತನ’ವೇ ಯುಗಾದಿಯ ಅನನ್ಯತೆ.

ಈ ಗುಣವೇ ಅದಕ್ಕೆ ಶ್ರಮ ಸಂಸ್ಕೃತಿಯ ಜನರ ಬದುಕಿನೊಟ್ಟಿಗೆ ಒಂದು ಅವಿನಾಭಾವ ಸಂಬಂಧ ಕಲ್ಪಿಸಿದೆ. ಯುಗಾದಿ ಕಟ್ಟಳೆಗಳ ಕಟ್ಟುನಿಟ್ಟಿನ ಸಂಪ್ರದಾಯಗಳಿಂದ ಬಿಗಿದ ಹಬ್ಬವಲ್ಲ. ಬದಲಿಗೆ ನಿಸರ್ಗಸಹಜ ಸಂಭ್ರಮ. ಇದು ಸುತ್ತಲಿನ ವಾತಾವರಣದ ಸಂಭ್ರಮವನ್ನು ಮನುಷ್ಯ ತನ್ನ ಬದುಕಿಗೂ ಬರಮಾಡಿಕೊಳ್ಳುವ ಸಂಕೇತದ ಹಬ್ಬ.

ಅನಾದಿಯೂ ಆಧುನಿಕವೂ…
ಬ್ರಹ್ಮ ತನ್ನ ಸೃಷ್ಟಿಕಾರ್ಯ ಆರಂಭಿಸಿದ ದಿನ ಇದು ಎಂಬುದು ಯುಗಾದಿಯೊಟ್ಟಿಗೆ ಜೋಡಿಸಿಕೊಂಡಿರುವ ಪೌರಾಣಿಕ ನಂಬಿಕೆ. ಯುಗದ ಆದಿ ಎಂಬ ಅದರ ಹೆಸರೇ ಈ ಆದಿಮತನವನ್ನು ಸೂಚಿಸುತ್ತದೆ. ಹಾಗೆಂದು ಪುರಾಣದ ಹುದುಲಿನಲ್ಲಿಯೇ ಕಳೆದುಹೋಗುವ ಹಬ್ಬವೂ ಇದಲ್ಲ ಎಂಬುದು ಮಹತ್ವದ ಸಂಗತಿ. ಜಗತ್ತಿನ ಜೀವಯಾನದ ಆರಂಭದ ನಿಲ್ದಾಣದಲ್ಲಿ ಕಾಲೂರಿರುವ ಈ ಹಬ್ಬದ ಕೈ ನಮ್ಮ ಇಂದಿಗೆ ಆ ಮೂಲಕ ನಾಳಿನ ನಿರೀಕ್ಷೆಯತ್ತ ಚಾಚಿಕೊಂಡಿದೆ.

ಹಳೆಯದನ್ನು ನೆನಪಿಸುವಷ್ಟೇ ಅದರಿಂದ ಬಿಡಿಸಿ ಕೊಂಡು ಹೊಸದನ್ನು ಬರಮಾಡಿಕೊಳ್ಳುವ ಆಶಯವನ್ನೂ ಯುಗಾದಿ ಹೊಂದಿದೆ. ಆದಿಮತೆಯನ್ನು ತನ್ನ ಹೆಸರಿ ನಲ್ಲಿಯೇ ಹೊಂದಿರುವ ಈ ಹಬ್ಬವನ್ನು ನಾವು ಆಚರಿಸು ವುದು ಹೊಸ ವರ್ಷ ಎಂದೇ! ಹೀಗೆ ಕಾಲದ ಎರಡು ಮುಖಗಳನ್ನೂ ಒಳಗೊಂಡ ಸಂಕರತೆ ಯುಗಾದಿ ಯದು. ಇಲ್ಲಿ ಹಳೆಯದನ್ನು ಕೊಡವಿಕೊಳ್ಳುವುದು ಎಂದರೆ ಅದನ್ನು ತಿರಸ್ಕರಿಸುವುದು ಎಂದಲ್ಲ. ಅದನ್ನು ವಿಸ್ಕೃತಿಗೆ ತಳ್ಳುವುದೂ ಎಂದೂ ಅಲ್ಲ.

ಹಳೆಯದು ಹೊಸತಕ್ಕೆ ಬಲಕೊಡುವುದು; ಹಳೆಯದನ್ನು ಜೀರ್ಣಿಸಿಕೊಂಡೇ ಹೊಸತು ಬೆಳೆಯುವುದು. ಶಿಶಿರದಲ್ಲಿ ಉದುರಿದ ಹಣ್ಣೆಲೆ ಮಣ್ಣಿಗೆ ಸೇರಿ ಗೊಬ್ಬರವಾಗಿ ಚಿಗುರೆಲೆಗೆ ಜೀವದಾಯಿಯಾಗುತ್ತದಲ್ಲವೇ? ಹಾಗೆಯೇ.

ಬೇವು ಬರೀ ಕಹಿಯಲ್ಲವೋ ಅಣ್ಣಾ…
ಬೇವು ಬೆಲ್ಲ ಯುಗಾದಿ ಸಂಕೇತಗಳು. ಇವನ್ನು ಬದುಕಿ ನಲ್ಲಿ ಎದುರಾಗುವ ಕಷ್ಟ ಸುಖ ಎಂದಷ್ಟೇ ಅರ್ಥೈಸಿಕೊಳ್ಳು ವುದೇ ಹೆಚ್ಚು. ಆದರೆ ಬೇವು ಬರೀ ಕಹಿಯಷ್ಟೇ ಅಲ್ಲ, ಹಲವು ಕಾಯಿಲೆಗಳಿಗೆ ಔಷಧವೂ ಹೌದು.  ಈ ಹಿನ್ನೆಲೆಯಲ್ಲಿಯೇ ಅದು ಸಂಕೇತವನ್ನು ಪರಿಭಾವಿಸಿದರೆ ಕಷ್ಟ ಬರೀ ಕಷ್ಟವಷ್ಟೇ ಅಲ್ಲ, ಬದುಕನ್ನು ಪಕ್ವವಾಗಿ ನೋಡುವ ಹೊಸ ದೃಷ್ಟಿಯನ್ನೂ ಕೊಡುತ್ತದೆಂಬ ಸತ್ಯ ಹೊಳೆಯುತ್ತದೆ.

ಕೊಂಡಿ ಕಳಚಿದರೆ…
ಹೀಗೆ ಈ ಹಬ್ಬದ ಒಂದೊಂದು ಆಚರಣೆ– ಆಶಯ ಗಳೂ ಪ್ರಕೃತಿಯೊಟ್ಟಿಗೆ ತಳುಕು ಹಾಕಿಕೊಂಡಿರುವ ಪರಿ ಗಮನಿಸಿದರೆ ಯುಗಾದಿ ಗ್ರಾಮೀಣ ಜನರ ಬದುಕು ಮತ್ತು ನಿಸರ್ಗದ ನಡುವಣ ಸಾವಯವ ಸಂಬಂಧದ ನಿದರ್ಶನವಾಗಿ ಕಾಣುತ್ತದೆ. ಅವೆರಡೂ ಒಂದರೊಳ ಗೊಂದು ಸೇರಿ ಬಿಡಿಸಲಾಗದ ಸಾವಯವ ಬೆಸುಗೆಯಲ್ಲಿಯೇ ಹಬ್ಬ ರೂಪುಗೊಂಡಿದೆ. ಅವುಗಳಲ್ಲಿ ಒಂದು ಕೊಂಡಿ ಕಳಚಿದರೂ ಗತಿ ಬದಲಾಗಿಬಿಡುತ್ತದೆ.

ಸುಂದರ ಶಬ್ದದ ನಡುವಣ ಒಂದಕ್ಷರ ಅಳಿಸಿಹೋದಂತೇ ಇಡೀ ಶಬ್ದ ಒಂದೋ ಅರ್ಥಹೀನವಾಗುತ್ತದೆ ಇಲ್ಲ ಅಪಾರ್ಥಕ್ಕೆ ತಿರುಗುತ್ತದೆ. ಇದೂ ಹಾಗೆಯೇ. ಆಚರಣೆಗಳ ಮೂಲ ಆಶಯಗಳೊಂದಿಗೆ ಮನುಷ್ಯನ ಬದುಕು ಕೊಂಡಿ ಕತ್ತರಿಸಿಕೊಳ್ಳುತ್ತಾ ಹೋದಂತೆಲ್ಲಾ ಹಬ್ಬಗಳು ಅರ್ಥ ಕಳೆದುಕೊಳ್ಳುತ್ತಾ ಹೋಗುತ್ತವೆ. ತನ್ನ ಜೀವನ್ಮುಖತೆಯನ್ನು ಕಳೆದು ಕೊಂಡು ಸೊರಗಿ ಒಣ ಆಚರಣೆಗಳಷ್ಟೇ ಆಗಿ ಉಳಿಯುತ್ತವೆ. ಸುಪುಷ್ಟ ಸುಂದರ ದೇಹ ಮರೆಯಾಗಿ ಅಸ್ಥಿಪಂಜರವಷ್ಟೇ ಉಳಿಯುತ್ತವೆ.

ಆದರೆ ನಾವು ಎಷ್ಟು ಮೂರ್ಖರೆಂದರೆ ಆ ಅಸ್ಥಿಪಂಜರವನ್ನೇ ದೇಹ ಅಂದುಕೊಳ್ಳುತ್ತೇವೆ. ಇನ್ನೇನು ಮುರಿದು ಬೀಳುವಂತೇ ಕಾಣುವ ಆ ಮೂಳೆ ತಡಿಕೆಯನ್ನು ಕಾಪಾಡುವುದು ಕರ್ತವ್ಯ ಎಂಬ ಪೊಳ್ಳು ಜವಾಬ್ದಾರಿ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಅದೊಂದು ರೀತಿ ಭ್ರಮೆ. ಆ ನಶೆಯೇರಿಸುವ ಭ್ರಮೆಯಲ್ಲಿ ಮುಳುಗುತ್ತಾ ಹೋದಂತೇ ನಶಿಸಿಹೋಗುತ್ತಿರುವ ಸನಾತನ ಸಂಪ್ರದಾಯ, ಸಂಸ್ಕೃತಿ, ಭವ್ಯ ದಿವ್ಯ ಇತಿಹಾಸ ಅಂತೆಲ್ಲ ಮೇಲು ಮೇಲಿನ ಆಕರ್ಷಕ ವ್ಯಾಖ್ಯಾನಗಳಲ್ಲಿ ಸಂಕೀರ್ಣ ಜೀವನಧರ್ಮವನ್ನು ಹಿಡಿಯಲು ಹೊರಡುತ್ತೇವೆ.

ನಮ್ಮ ಅಂತರಾತ್ಮಕ್ಕೆ ‘ನಿಜ’ದಲ್ಲಿ ಅನ್ನಿಸದ, ಎಲ್ಲಿಂದಲೋ ಕಡ ತಂದ ಹೇಳಿಕೆಗಳು ಪುಂಖಾನುಪುಂಖವಾಗಿ ಉದುರತೊಡಗುತ್ತವೆ. ಈ ಕಪಿಮುಷ್ಟಿಯ ಹಿಡಿತದಲ್ಲಿ ‘ಜೀವನಧರ್ಮ’ದ ‘ಜೀವನ’ ಹೋಗಿ ‘ಧರ್ಮ’ವಷ್ಟೇ ಉಳಿಯುತ್ತದೆ. ಜೀವವಿಲ್ಲದ ಅಸ್ಥಿಪಂಜರದಂತೆ.
ಹೀಗೆ ಧರ್ಮರಕ್ಷಕ ಸೇನಾನಿಯಾಗಿ ಬದಲಾದ ನಮಗೆ ಯುಗಾದಿ, ನಮ್ಮ ಅಪ್ಪ ಅಮ್ಮನಿಗೆ ಕಳಿಸುವಂತೆ ತಾನು ಬರುವ ಸುದ್ದಿ ಕಳಿಸುವುದಿಲ್ಲ. ದಿನದರ್ಶಿಕೆ  ನೆಚ್ಚಿಕೊಂಡ ನಮಗೆ ಮಾವಿನ ಹೂವಿನ ಹಂಗಿಲ್ಲ.

ಮಾರುಕಟ್ಟೆಯಲ್ಲಿ ರೊಕ್ಕಕ್ಕೆ ಸಿಕ್ಕ ಮಾವಿನ ತಳಿರನ್ನು ತಂದು ಬಾಗಿಲಿಗೆ ನೇತು ಹಾಕುವ ನಮಗೆ ಹಬ್ಬದ ಒಂದೊಂದು ಆಚರಣೆಯೂ ಸಂಸ್ಕೃತಿ ರಕ್ಷಣೆಯ ಹೋರಾಟ. ಈ ಹೋರಾಟಕ್ಕೆ ಬಿದ್ದ ಕ್ಷಣದಲ್ಲಿ ಹಣೆಮೇಲಿನ ಚೆಂದದ ಪುಟ್ಟ ಕುಂಕುಮ ಹೆಬ್ಬೆರಳ ಗಾತ್ರಕ್ಕೆ ಹರಡಿ ಹಣೆಯುದ್ದಕ್ಕೂ ವಿಸ್ತರಿಸಿಕೊಳ್ಳುತ್ತದೆ. ರಣಬಿಸಿಲಿನಲ್ಲಿ ರಸ್ತೆಯುದ್ದ  ಕಿಲೋಮಿಟರ್‌ಗಟ್ಟಲೆ ಮೆರ ವಣಿಗೆ ಹೊರಡಬೇಕಾಗುತ್ತದೆ. ಬೃಹತ್‌ ಸಮಾವೇಶ ಗಳಲ್ಲಿ ಆವೇಶಗೊಳ್ಳುವುದು ವಿಚಿತ್ರ ಸಮಾಧಾನ ನೀಡುತ್ತದೆ.

ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಏನೇ ಮಾಡಿದರೂ ವಿರೋಚಿತ ಎನಿಸುತ್ತದೆ. ಅದಕ್ಕೆ ಸಮರ್ಥನೆಯಾಗಿ ಬೇರೆ ಧರ್ಮದವರ ದುಷ್ಟತನದ ನಿದರ್ಶನಗಳೂ ಧಾರಾಳವಾಗಿ ದೊರೆಯುತ್ತವೆ. ಈ ಎಲ್ಲ ರಕ್ಷಣೆಯ ಗೋಜಲಲ್ಲಿ ಮನಸ್ಸಿನೊಳಗಿನ ಮನುಷ್ಯಸಹಜ ಪ್ರೀತಿ, ಮಾನವೀಯ ತೆಯ ಒರತೆ ಒಣಗಿಹೋಗುವ ವಿಪರ್‍ಯಾಸ ಮಾತ್ರ ನಮ್ಮ ಉಗ್ರನೋಟದ ಪಟಲಕ್ಕೆ ದಕ್ಕುವುದೇ ಇಲ್ಲ.

ಇಲ್ಲದ ಯಾವುದನ್ನೋ ಇದೆಯೆಂದುಕೊಂಡು ರಕ್ಷಿಸುವ ವ್ಯರ್ಥ ಹೋರಾಟದ ಭ್ರಮೆಗೆ ಬಿದ್ದು ನಿಜದಲ್ಲಿ ನಾವು ಕಳೆದುಕೊಂಡಿದ್ದೇನು? ಗಳಿಸಿಕೊಳ್ಳಬೇಕಾಗಿರುವುದೇನು ಎಂದು ಯೋಚಿಸುವಷ್ಟು ಸಮಾಧಾನ ಇಂದು ನಮಗ್ಯಾರಿಗೂ ಉಳಿದಿಲ್ಲ. ಚಿಗುರೆಲೆಯ ಜತೆ ಸಂಪರ್ಕ ಕಡಿದುಕೊಂಡ ಬದುಕಿನಲ್ಲಿ ಯುಗಾದಿ ಅಪೂರ್ಣ ಎಂಬ ಸರಳ ಸತ್ಯ ನಮಗ್ಯಾಕೆ ಅರಿವಾಗುವುದಿಲ್ಲ.?

ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಯುಗಾದಿಯ ಹಿಂದಿನ ದಿನ ‘ಚಂದ್ರದರ್ಶನ’ದ ಪದ್ಧತಿಯಿದೆ. ಅಂದು ಸಂಜೆ ಎಲ್ಲ ನಾಗರಿಕರೂ ಬೇವು ಬೆಲ್ಲವನ್ನು ಕಟ್ಟಿಕೊಂಡು ಊರಾಚೆಗಿನ ಬಯಲತ್ತ ಸಾಗುತ್ತಾರೆ. ಬಯಲಲ್ಲಿ ಎಲ್ಲರೂ ಒಟ್ಟಿಗೇ ಸೇರಿ ಬರಲಿರುವ ಹೊಸ ವರ್ಷದ ಚಂದ್ರನ ಉದಯಕ್ಕಾಗಿ ಕಾಯುತ್ತಾರೆ. ಚಂದ್ರನ ಉದಯವಾಗಿದ್ದೇ ಸಂಭ್ರಮದಲ್ಲಿ ಪರಸ್ಪರ ಹೊಸ ವರ್ಷಕ್ಕೆ ಶುಭ ಹಾರೈಸಿ ಕೊಳ್ಳುತ್ತಾರೆ.

ಬೇವು ಬೆಲ್ಲ ಹಂಚಿಕೊಂಡು ಕಿರಿ ಯರು ಹಿರಿಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಹಿರಿ ಯರು ಹೊಸ ವರ್ಷ­ಪಂಚಾಂಗ ಪಾರಾಯಣ ಮಾಡು ವುದೂ ಇದೆ. ಮತ್ತೆ ತಮ್ಮ ತಮ್ಮ ಮನೆಗೆ ಮರಳಿ ಮರು ದಿನದ ಯುಗಾದಿಯ ಸಂಭ್ರಮದ ಸಿದ್ಧತೆಯಲ್ಲಿ ತೊಡಗುತ್ತಾರೆ.
ಹೀಗೆ ಹಬ್ಬಕ್ಕೂ ಮುನ್ನ ಊರ ಜನರೆಲ್ಲ ಒಂದೇ ಕಡೆ ಸೇರಿ ಚಂದ್ರದರ್ಶನಕ್ಕಾಗಿ ಕಾಯುವ ಮತ್ತು ಚಂದ್ರದರ್ಶನ ವಾಗಿದ್ದೇ ಧನ್ಯತೆಯಲ್ಲಿ ಸಂಭ್ರಮಿಸುವ ಆಚರಣೆಯೇ ಸಶಕ್ತ ರೂಪಕವಾಗಿ ಕಾಣುತ್ತದೆ.  ಅದು ಬರೀ ಆಗಸದಲ್ಲಿನ ಉದಯಿಸುವ ಚಂದ್ರೋದಯವಷ್ಟೇ ಅಲ್ಲ, ನಮ್ಮೆಲ್ಲರ ಎದೆ ಮುಗಿಲಲ್ಲಿ ಮೇಲೇರಿ ಬರಬೇಕಾದ ಮಮತೆಯ ರೂಪಕ ಚಂದ್ರನೂ ಹೌದು.

ಆ ಚಂದ್ರನ ಮಂದಬೆಳಕಲ್ಲಿ ಕಾಣುವ ಜಗತ್ತೇ ಬೇರೆ. ಸುತ್ತಲನ್ನು ಸೂಕ್ಷ್ಮವಾಗಿ ಗಮನಿಸುವ ತಾಳ್ಮೆ ಕಲಿಸುವ, ಎಂಥ ಕಠೋರ ರೂಪವನ್ನು ಹಾಲುಬೆಳಕಿನಲ್ಲಿ ಮೀಯಿಸಿ ಮೃದುಗೊಳಿಸುವ, ಒಲವಿನ ಝರಿಯಲ್ಲಿ ಕಲ್ಲಿನ ಮೂರ್ತಿಯನ್ನೂ ಕಲ್ಲುಸಕ್ಕರೆಯಂತೇ ಸಿಹಿಯಾಗಿ ಕರಗಿಸುವ ಚೆಂದ ಜಗತ್ತದು. ಮಾನವ ಸಂಬಂಧಗಳನ್ನು ಉದ್ದೀಪಿಸುವ, ನಮ್ಮನ್ನು ನಮಗೇ ನಿಜದ ಬೆಳಕಲ್ಲಿ ಕಾಣಿಸುವ ಈ ಹೃದಯ ಚಂದ್ರೋದಯಕ್ಕಾಗಿ ಎದುರುನೋಡುವ ಮುಗುದತೆ ಎಲ್ಲರ ಎದೆಗೂ ವ್ಯಾಪಿಸಲಿ. ಈ ನವ ಶುರುವಾತಿಗೆ ನಾಂದಿಯಾಗಲಿ ಈ ಯುಗಾದಿ…

ಹೊಸ ವರ್ಷದ ಹಬ್ಬದ ಕುರಿತು
ಯುಗಾದಿ ಹಿಂದೂ ಧರ್ಮದ ಹಲವು ಪರಂಪರೆಗಳ ಪ್ರಾರಂಭ ದಿನ. ಅದು ಹೊಸ ವರ್ಷಾರಂಭವೂ ಆಗಿದ್ದರಿಂದ ಹಿಂದು ಪಂಚಾಂಗ ಆರಂಭವಾಗುವುದೂ ಅಂದಿನಿಂದಲೇ. ಈ ಹಬ್ಬದ ದಿನವನ್ನು ಸೂರ್ಯಮಾನ ಯುಗಾದಿ ಮತ್ತು ಚಂದ್ರಮಾನ ಯುಗಾದಿ ಎಂದು ಎರಡು ರೀತಿಯಲ್ಲಿ ನಿರ್ಧರಿಸಲಾಗುತ್ತದೆ. ಸೂರ್ಯನ ಚಲನೆಯಿಂದ ಎಣಿಕೆ ಮಾಡುವುದನ್ನು ಸೌರಮಾನ ಯುಗಾದಿ ಎಂದೂ, ಚಂದ್ರನ ಚಲನೆ ಆಧರಿಸಿ ಅಮವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಯುಗಾದಿ ಎಂದೂ ಹೆಸರು.

ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿಯೇ ಹೆಚ್ಚು ರೂಢಿಯಲ್ಲಿದೆ. ಬ್ರಹ್ಮನು ಚೈತ್ರ ಶುಕ್ಲ ಪ್ರತಿಪದೆಯಂದು ಸೂರ್ಯೋದಯದ ಕಾಲಕ್ಕೆ ಈ ಜಗತ್ತಿನ ಸೃಷ್ಟಿ ಕಾರ್ಯ ಆರಂಭಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಗಳನ್ನು ಸೃಷ್ಟಿಸಿ ಕಾಲ ಗಣನೆ ಆರಂಭಸಿದ. ವಿಷ್ಣು ಮತ್ಸ್ಯಾವತಾರ ತಳೆದ ದಿನ ವದು, ಶ್ರೀರಾಮನು ರಾವಣಸಂಹಾರ ಮಾಡಿ ರಾಮರಾಜ್ಯ ಆರಂಭಿಸಿದ ದಿನ ಎಂಬುದೆಲ್ಲ ಯುಗಾದಿ ಹಬ್ಬಕ್ಕಿರುವ ಪುರಾಣ ಕಾರಣಗಳು.

ಶಾಲಿವಾಹನನು ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಆರಂಭವಾಗಿದ್ದೂ ಯುಗಾದಿಯಂದೇ. ಮುಂಜಾವಿನ ತೈಲಾಭ್ಯಂಗ ಸ್ನಾನ, ಮನೆಯನ್ನೆಲ್ಲ ಮಾವು ಬೇವು ತಳಿರಿನಿಂದ ಸಿಂಗರಿಸಿ ಹೊಸ ವರ್ಷ ಬರಮಾಡಿಕೊಳ್ಳುವುದು, ಬೇವು–ಬೆಲ್ಲ ತಿಂದು ಹೊಸ ವರ್ಷದ ಕಷ್ಟ–ಸುಖಗಳನ್ನು ಸಮನಾಗಿ ಸ್ವೀಕರಿಸಲು ಸಂಕಲ್ಪಿಸುವುದು ಇವೇ ಮೊದಲಾದವು ಯುಗಾದಿಯ ಪ್ರಮುಖ ಆಚರಣೆಗಳು.

ಪಂಚಾಂಗ ಓದಿ ವರ್ಷದ ಕರ್ಮಫಲಗಳನ್ನು ಅರಿಯುವುದು, ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಂಡು ನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳು ವುದು ಹೀಗೆ ಇನ್ನೂ ಅನೇಕ ವಿಶಿಷ್ಟ ಆಚರಣೆಗಳೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಣಸಿಗುತ್ತವೆ.  ಕೆಲವು ಪ್ರದೇಶಗಳಲ್ಲಿ ಯುಗಾದಿಯ ದಿನ ಜೂಜಾಡುವ ಸಂಪ್ರದಾಯವೂ ಇದೆ. ಯುಗಾದಿಯ ಮರುದಿನ ವರ್ಷ ತೊಡಕು ಎಂದು ಆಚರಿಸುತ್ತಾರೆ. ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಮಧ್ಯಸೇವನೆಯೂ ಈ ವರ್ಷತೊಡಕು ಆಚರಣೆಯ ಭಾಗ.

Write A Comment