ಮಂಗಳೂರು, ಫೆ.07: ರಾಜ್ಯದ ಕಾಂಗ್ರೆಸ್ ನೇತೃತ್ವದ ಸಿದ್ದಾರಾಮಯ್ಯರ ಸರ್ಕಾರ ವಾಕ್ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಕಸಿಯುವ ಕೆಲಸ ಮಾಡುತ್ತಿದೆ. ಹಿಂದೂ ಸಂಘಟನೆಯ ರಾಷ್ಟ್ರೀಯ ನಾಯಕ, ಪ್ರವೀಣ್ ಬಾಯಿ ತೊಗಾಡಿಯ ಮೇಲೆ ಯಾವ ಪ್ರಕರಣವು ಕರ್ನಾಟಕದಲ್ಲಿ ಇಲ್ಲ. ಆದರೂ ಅವರ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಿರುವುದು ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಶನಿವಾರ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವೀಣ್ ಬಾಯ್ ತೊಗಾಡಿಯರನ್ನು ರಾಜ್ಯ ಪ್ರವೇಶಕ್ಕೆ ನಿರಾಕರಿಸುತ್ತಿರುವುದರ ಮೂಲಕ ರಾಜ್ಯದಲ್ಲಿ ಪೊಲೀಸ್ ಸರಕಾರವನ್ನು ಮಾಡುವಂತಹ ನಿರ್ಧಾರವನ್ನು ಸಿದ್ದಾರಾಮಯ್ಯನವರು ಮಾಡಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಈ ಬಗ್ಗೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ. ಎಂದು ಎಚ್ಚರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಯೋಗೀಶ್ ಭಟ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





