ಕನ್ನಡ ವಾರ್ತೆಗಳು

ಸ೦ಶೋಧನೆ ಎ೦ದರೆ ಮಾಹಿತಿಯ ಸಮಗ್ರ ದಾಖಲೀಕರಣ ಎನ್ನುವ ಮೂಢನಂಬಿಕೆ ಬೇಡ : ಪ್ರೊ. ಶಿವರಾಮ ಪಡಿಕ್ಕಲ್

Pinterest LinkedIn Tumblr

unvercity_college

ಮಂಗಳೂರು,ಜ.29 : ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಕನ್ನಡ ಸಂಶೋಧನೆ ಕುರಿತ ಸರಣಿ ಚಟುವಟಿಕೆಗಳ ಕಾರ್ಯಕ್ರಮ ‘ನಿರಂತರ’ವನ್ನು ಉದ್ಘಾಟಿಸಿ ‘ಸಂಶೋಧನೆಯ ಸ್ವರೂಪ ಮತ್ತು ಭವಿಷ್ಯ’ ಎಂಬ ವಿಷಯದ ಕುರಿತು ಹೈದರಾಬಾದಿನ ಕೇ೦ದ್ರೀಯ ವಿಶ್ವವಿದ್ಯಾನಿಲಯದ ಅನುವಾದ ಮತ್ತು ಆನ್ವಯಿಕ ಭಾಷಾ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ವಿಶೇಷ ಉಪನ್ಯಾಸ ನೀಡಿದರು.

ಸಮಾಜ ವಿಜ್ಞಾನ ಹಾಗೂ ಪ್ರಾಕೃತಿಕ ವಿಜ್ಞಾನಗಳಲ್ಲಿ ನಡೆಯುತ್ತಿರುವ ಸ೦ಶೋಧನ ವಿಧಿ ವಿಧಾನಗಳ ಕುರಿತು ಪ್ರಸ್ತಾವಿಸಿ ಪ್ರಾಕೃತಿಕ ವಿಜ್ಞಾನಗಳ ಅನುಭವವಾದಿ ಗ್ರಹೀತಗಳು ಮಾನವಿಕ ವಿಜ್ಞಾನಗಳಲ್ಲಿ ನಡೆಯುತ್ತಿರುವ ಸ೦ಶೋಧನೆಯಲ್ಲಿ ಹೇಗೆ ಅ೦ತಸ್ಥಗೊ೦ಡಿವೆ ಎ೦ಬುದನ್ನು ವಿಶ್ಲೇಷಿಸಿದರು. ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಸ೦ಶೋಧನೆ ಸ೦ಸ್ಕೃತಿ ಮತ್ತು ಚಾರಿತ್ರಿಕತೆಯನ್ನು ಗಮನದಲ್ಲಿಟ್ಟುಕೊ೦ಡು ನಡೆಯಬೇಕಾಗಿದೆ. ವಿಜ್ಞಾನ ವಿಷಯಗಳಲ್ಲಿ ನಡೆಯುವ ವೈಜ್ಞಾನಿಕ ಸ೦ಶೋಧನೆ ವಸ್ತುನಿಷ್ಠ ಮತ್ತು ಭೌತಿಕ ಜಗತ್ತಿನ ನಿಯಮಗಳನ್ನು ಕುರಿತಿದ್ದರೆ ಸಾಹಿತ್ಯ, ಮಾನವಿಕ ಮತ್ತು ಸಮಾಜ ವಿಜಾಗಳ ಸ೦ಶೋಧನೆಗಳು ಸಾಮಾಜಿಕ ಮೌಲ್ಯಗಳನ್ನು ಕುರಿತಾಗಿದೆ. ಸಾರ್ವತ್ರೀಕರಣದ ನಿಯಮಗಳನ್ನು ಪ್ರತಿಪಾದಿಸುವ ವಿಜ್ಞಾನ ವಿಷಯಗಳಿಗಿ೦ತ ಪರಿವರ್ತನೆಗೊಳಗಾಗುತ್ತಿರುವ ಸಮಾಜ, ಸ೦ಸ್ಕೃತಿ ಕುರಿತು ಸ೦ಶೋಧನೆ ನಡೆಸುವ ಮಾನವಿಕ ವಿಜ್ಞಾನಗಳ ಸ೦ಶೋಧನೆಗಳು ವಿಮರ್ಶಾತ್ಮಕ ದೃಷ್ಟಿಕೋನವನ್ನಿಟ್ಟುಕೊ೦ಡು, ಕಾಲಿಕ ನಿರ್ದಿಷ್ಟತೆಗಳನ್ನು ಗುರುತಿಸಬೇಕಾಗಿದೆ ಎ೦ಬುದಾಗಿ ಪ್ರೊ. ಪಡಿಕ್ಕಲ್ ಅವರು ಪ್ರತಿಪಾದಿಸಿದರು.

ಸಂಶೋಧನೆಯೆಂಬ ಶೈಕ್ಷಣಿಕ ಶಿಸ್ತು ಇಂದು ಹೊಸ ವಿಷಯಗಳ ಪ್ರವೇಶ ಮತ್ತು ಹೆಚ್ಚು ಸಂಶೋಧಕರ ಪ್ರವೇಶದ ಕಾರಣದಿಂದ ವಿಸ್ತರಣೆಗೊಳ್ಳುತ್ತಿದೆ. ಆದರೆ ಸಂಶೋಧನೆಗೆ ಸಂಬಂಧಿಸಿದ ವಿಷಯದ ಕುರಿತ ಎಲ್ಲಾ ವಿವರಗಳೂ ತನ್ನ ಪ್ರಬಂಧ ಒಳಗೊಳ್ಳಬೇಕೆಂಬ ಮೂಢನಂಬಿಕೆ ಹೆಚ್ಚಾಗಿದೆ. ಈ ಕುರಿತು ನಾವು ಎಚ್ಚರಗೊಳ್ಳಬೇಕಿದೆ ಎಂದು ಡಾ.ಶಿವರಾಮ ಪಡಿಕ್ಕಲ್ ಹೇಳಿದರು.

ಮಾನವ ವಿಜ್ಞಾನ, ಸಮಾಜವಿಜ್ಞಾನ ಮತ್ತು ಭಾಷಿಕ ವಿಷಯಗಳ ಸಂಶೋಧನೆಯ ಸಂದರ್ಭದಲ್ಲಿ ಸಾಮಾನ್ಯ ವಿಜ್ಞಾನದ ವಸ್ತು ನಿಷ್ಠ ಮಾದರಿ ಸಲ್ಲುವುದಿಲ್ಲ. ವಸ್ತುವೇ ಅರಿವನ್ನು ನಿರ್ವಚಿಸುತ್ತದೆ ಎಂಬ ವೈಜ್ಞಾನಿಕತೆ ಅಥವಾ ಹುಸಿ ವೈಜ್ಞಾನಿಕತೆಯ ದಾರಿಯಲ್ಲಿ ಸಾಗದೇ ಮಾನವಿಕ ವಿಷಯಗಳು ಅನುಭವವಾದಿ (ಎ೦ಪಿರಿಸಿಸ೦ನ) ನೆಲೆಯನ್ನು ಬಿಡಬೇಕಿದೆ. ಸಂಶೋಧನೆಗೆ ಸಂಬಂಧಿಸಿದ ಮೂಲ ಪಠ್ಯಗಳನ್ನು ಸಮಗ್ರವಾಗಿ ಓದಿ ಕೆಲವನ್ನು ಪ್ರಾತಿನಿಧಿಕವೆಂದು ವಿವೇಚನೆಗೊಳಪಡಿಸುವ ಮತ್ತು ಅನ್ವಯಿಸುವ ಸೈದ್ಧಾಂತಿಕ ನಿಲುವಿಗೆ ಸಂಬಂಧಿಸಿದ ವಿಪುಲವಾದ ಓದು ಸ೦ಶೋಧಕರಿಗೆ ಅಗತ್ಯ. ಪಾಶ್ಚಾತ್ಯ ಚಿಂತನೆಗಳೇ ಮುಖ್ಯ ಎಂದಾಗಲೀ ಅವುಗಳು ಬೇಡವೇ ಎಂಬ ನಿಲುವಾಗಲೀ ದಾರ್ಷ್ಟ್ಯ ಅಥವಾ ದಡ್ಡತನದ್ದು. ಹಾಗಾಗದೇ ಪ್ರಶ್ನೆ ಹಾಕುತಾ, ಸಿಕ್ಕ ಉತ್ತರಕ್ಕೆ ಮತ್ತೆ ಪ್ರಶ್ನೆಗಳನ್ನಿಡುತ್ತಾ ಸಂಶೋಧನೆಯನ್ನು ಸಂಕೀರ್ಣಗೊಳಿಸುತ್ತಾ ಆಳಕ್ಕಿಳಿಯಬೇಕಿದೆ. ಇಂತಹ ಪ್ರಯತ್ನಗಳಿಗೆ ನಿರಂತರ ಚಿಂತನೆ- ಸಂವಾದಗಳು ನಡೆಯಬೇಕಿದೆ ಎಂದು ಅವರು ಹೇಳಿದರು.

ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಶಿವರಾಮ ಶೆಟ್ಟಿ `ನಿರ೦ತರ’ ಕಾರ್ಯಕ್ರಮದ ಉದ್ದೇಶವನ್ನು ಪ್ರಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿ ಮುಸ್ತಫಾ ವಂದಿಸಿದರು. ಶ್ರುತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Write A Comment