ಮಂಗಳೂರು,ಡಿ.08: ಉಲಾಯಿಬೆಟ್ಟುವಿನ ಬಳಿ ದತ್ತಮಾಲಾಧಾರಿಗಳ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಭಜರಂಗದಳದ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಸೋಮವಾರ ಗುರುಪುರ ಬಂದ್ಗೆ ಕರೆ ನೀಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುರುಪುರ, ಉಳಾಯಿಬೆಟ್ಟು ಮತ್ತು ಸುತ್ತಲ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗುರುಪುರ, ಉಳಾಯಿಬೆಟ್ಟು ,ಬಜ್ಪೆ, ವಾಮಂಜೂರು ಮತ್ತು ಸುತ್ತಲಿನ ಪರಿಸರದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಉಳಾಯಿಬೆಟ್ಟು ತನಕ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿಬಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಳಾಯಿಬೆಟ್ಟುವಿಗೆ ಪ್ರವೇಶ ಪಡೆಯುವಲ್ಲಿ ಮುನ್ನುಗ್ಗಲು ನೋಡಿದಾಗ ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ತಳ್ಳಾಟ ನಡೆದಿದೆ. ವಿ.ಹಿಂ.ಪ. ನಾಯಕ ಜಗದೀಶ್ ಶೇಣವ, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್, ಭಜರಂಗದಳ ಸಂಚಾಲಕ ಶರಣ್ ಪಂಪ್ ವೆಲ್ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿ ವಿಫಲವಾಗಿದ್ದಾರೆ.
ಹಿಂದೂ ಮುಖಂಡರ ಬಂಧನ :
ಇದೇ ವೇಳೆ ಭಜರಂಗದಳ, ಹಿಂದೂ ಜಾಗರಣ ವೇದಿಕೆ, ವಿ.ಹಿಂ.ಪ. ಸಂಘಟನೆಗಳ ಕಾರ್ಯಕರ್ತರು ಸೆಕ್ಷನ್ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದು, ಉಳಾಯಿಬೆಟ್ಟು ಪ್ರದೇಶಕ್ಕೆ ನುಗ್ಗಲು ಯತ್ನಿಸಿದ ವೇಳೆ ಪೊಲೀಸರು ಲಾಠಿ ಛಾರ್ಜ್ ನಡೆಸಿದ್ದಾರೆ. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ವಿಎಚ್ಪಿ ಮುಖಂಡ ಜಗದೀಶ್, ಸತ್ಯಜಿತ್ ಸುರತ್ಕಲ್, ಪ್ರಸಾದ್ ಅತ್ತಾವರ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಪೊಲೀಸರು ಸರಕಾರಿ ಬಸ್ಸಿಗೆ ತುಂಬಿಸಿ ಕರೆದೊಯ್ದಿದ್ದಾರೆ. ಈ ವೇಳೆ ಮಾತಾಡಿದ ಶರಣ್ ಪಂಪ್ ವೆಲ್ ಅವರು ಸಂಘಟನೆಗಳ ಕಾರ್ಯಕರ್ತರನ್ನು ವಾಪಸ್ ತೆರಳುವಂತೆ ಮನವಿ ಮಾಡಿದ್ದಾರೆ.
ಪರಿಸರದಲ್ಲಿ ಅಘೋಷಿತ ಕಫ್ರ್ಯೂ ವಾತಾವರಣ / ಪರಿಸ್ಥಿತಿ ನಿಯಂತ್ರಣದಲ್ಲಿ…
ಬಂದ್ ನಿಂದಾಗಿ ಬಸ್, ರಿಕ್ಷಾಗಳು ಸಂಚಾರ ನಿಲ್ಲಿಸಿವೆ. ಮುಂಜಾನೆ ಕೈಕಂಬ, ಎಡಪದವು, ಬಜ್ಪೆ ಪರಿಸರದಲ್ಲಿ ವಾಹನಗಳಿಗೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಗುರುಪುರ, ಉಳಾಯಿಬೆಟ್ಟು ಪರಿಸರದಲ್ಲಿ ಸೋಮವಾರ ನಸುಕಿನ ಜಾವವೇ ಟೈರ್ ಗಳನ್ನು ರಸ್ತೆ ಮಧ್ಯೆ ಇರಿಸಿ ಬೆಂಕಿ ಹಚ್ಚುವ ಮೂಲಕ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸ್ಥಳೀಯ ಬೇಕರಿಯೊಂದಕ್ಕೆ ಬೆಂಕಿ ಹಚ್ಚಲು ದುಷ್ಕರ್ಮಿಗಳು ವಿಫಲಯತ್ನ ನಡೆಸಿದ್ದು ಪೊಲೀಸರು ಸಕಾಲಿಕ ಕಾರ್ಯಾಚರಣೆಯಿಂದ ಅನಾಹುತ ತಪ್ಪಿಸಿದ್ದಾರೆ.
ಅಂಗಡಿ-ಮುಂಗಟ್ಟುಗಳು ಶಟರ್ ಎಳೆದುಕೊಂಡಿದ್ದು ಅಘೋಷಿತ ಕಫ್ರ್ಯೂ ವಾತಾವರಣ ನಿರ್ಮಾಣಗೊಂಡಿದೆ. ಸ್ಥಳದಲ್ಲಿ ಪೊಲೀಸರು, ಕೆಎಸ್ಆರ್ಪಿ ತುಕಡಿ ಬಂದೋಬಸ್ತ್ ನಡೆಸುತ್ತಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಪೊಲೀಸರ ಬಂದೋಬಸ್ತ್ ನಡುವೆಯೇ ಕೆಲವರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮೂರು ವಾಹನಗಳು ಜಖಂಗೊಂಡಿವೆ. ಕೆಎಸ್ಆರ್ಟಿಸಿಯ ರಾಜಹಂಸ ಬಸ್ ಬಸ್ಸಿಗೆ ಕೆಲವರು ಕಲ್ಲು ತೂರಿದ್ದಾರೆ. ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಖಾಸಗಿ ಬಸ್ಸುಗಳು ಬಂದ್ಗೆ ಬೆಂಬಲ ನೀಡಿದ್ದು, ಸಂಚಾರವನ್ನು ಸ್ಥಗಿತಗೊಳಿಸಿವೆ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದೆ. ಹೆಚ್ಚುವರಿ ಪೊಲೀಸ್ ತುಕಡಿಯನ್ನು ಕರೆಸಿಕೊಳ್ಳಲಾಗಿದೆ.













































