ಕನ್ನಡ ವಾರ್ತೆಗಳು

ದತ್ತ ಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಗುರುಪುರ ಫಿರ್ಕಾ ಬಂದ್ : 144 ಸೆಕ್ಷನ್ ಜಾರಿ : ಪರಿಸ್ಥಿತಿ ಉದ್ವಿಘ್ನ

Pinterest LinkedIn Tumblr

gurupura_band_photo_1

ಮಂಗಳೂರು: ಉಳಾಯಿಬೆಟ್ಟು ಪ್ರದೇಶದಲ್ಲಿ ದತ್ತ ಮಾಲಾಧಾರಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು ಇಂದು ಗುರುಪುರ ಫಿರ್ಕಾ ವ್ಯಾಪ್ತಿಯ ಬಜಪೆ, ಕಟೀಲು, ಎಕ್ಕಾರು, ಎಡಪದವು, ಕುಪ್ಪೆಪದವು, ನೀರುಮಾರ್ಗ, ವಾಮಂಜೂರು, ಕೈಕಂಬ ಪ್ರದೇಶದಲ್ಲಿ ಬಂದ್ ಕರೆ ನೀಡಿದ್ದು, ಬಂದ್ ಭಾಗಶ: ಯಶಸ್ವಿಯಾಗಿದೆ.

ಬಂದ್ ಹಿನ್ನೆಲೆಯಲ್ಲಿ ಉಳಾಯಿಬೆಟ್ಟು ಗ್ರಾಮ ಮತ್ತು ಆಸುಪಾಸಿನಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸೆಕ್ಷನ್ 144 ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.

gurupura_band_photo_4

ಅದರೂ ಭಜರಂಗದಳ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದಾರೆ. ಸೋಮವಾರ ಮುಂಜಾನೆ 11 ಗಂಟೆಗೆ ವಾಮಂಜೂರು ಜಂಕ್ಷನ್ನಿನಿಂದ ಗುರುಪುರದವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಾವಿರಾರು ಮಂದಿ ಕಾರ್ಯಕರ್ತರು ಗುರುಪುರ, ಕೈಕಂಬ, ಬಜ್ಪೆಯಲ್ಲಿ ಜಮಾಯಿಸಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

gurupura_band_photo_2

ಡಿ.5 ರಂದು ರಾತ್ರಿ ದತ್ತಪೀಠ ಮಾಲಾಧಾರಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಉಳಾಯಿಬೆಟ್ಟು ಬಳಿ ಕಲ್ಲು ತೂರಾಟ ನಡೆಸಿ ಮಾಲಾಧಾರಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಇದನ್ನು ಖಂಡಿಸಿ ಸೋಮವಾರ ಜಿಲ್ಲೆಯ ವಿವಿಧೆಡೆ ಬಂದ್ ನಡೆಸಲು ಹಿಂದೂ ಸಂಘಟನೆಗಳ ನಾಯಕರು ಕರೆ ನೀಡಿದ್ದರು. ರಾಜ್ಯ ಸರಕಾರ, ಉಸ್ತುವಾರಿ ಸಚಿವರು, ಶಾಸಕರು ಹಾಗೂ ಪೊಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಹಿಂದು ಸಮಾಜದ ಮೇಲೆ ನಿರಂತರ ನಡೆಯುತ್ತಿರುವ ಇಂಥ ಅಮಾನುಷ ಘಟನೆಗಳನ್ನು ಕಾನೂನಿನ ಮೂಲಕ ನಿಲ್ಲಿಸಿ, ಸೂಕ್ತ ನ್ಯಾಯ ಒದಗಿಸಬೇಕು. ಹಲ್ಲೆಗೊಳಗಾದವರಿಗೆ ಸೂಕ್ತ ಪರಿಹಾರ ನೀಡಿ, ಮುಂದೆ ಇಂಥ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಬೇಕು. ಆರೋಪಿಗಳಿಗೆ ಸರಕಾರ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕು ಎಂದು ಸಂಘ ಪರಿವಾರದ ಮುಖಂಡರಾದ ಎಂ.ಬಿ.ಪುರಾಣಿಕ್, ಸತ್ಯಜಿತ್ ಸುರತ್ಕಲ್, ಬಿ.ಎಸ್.ಪ್ರಕಾಶ್,ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗಳ ದಳ ಪದಾಧಿಕಾರಿಗಳಾದ ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್, ಪ್ರದೀಪ್, ಮನೋಹರ ಸುವರ್ಣ, ಪ್ರವೀಣ್ ಕುಮಾರ್, ಪುನೀತ್ ಮುಂತಾದವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು.

gurupura_band_photo_3

ಈ ಮಧ್ಯೆ ಆದಿತ್ಯವಾರ ರಾತ್ರಿ ಬಜ್ಪೆ ಸಮೀಪದ ಕೆಂಜಾರ್ ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನನ್ನು ದುಷ್ಕರ್ಮಿಗಳ ತಂಡ ಕಡಿದು ಕೊಲೆಗೈಯಲು ಯತ್ನಿಸಿದ್ದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗುರುಪುರ, ಉಳಾಯಿಬೆಟ್ಟು, ಬಜ್ಪೆ, ಪರಾರಿ, ವಾಮಂಜೂರಿನಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Write A Comment