ರಾಷ್ಟ್ರೀಯ

ರಾಮ್‌ಪಾಲ್ ಬಂಧನ ಕಾರ್ಯಾಚರಣೆಗೆ 26 ಕೋಟಿ ರೂ. ವೆಚ್ಚ

Pinterest LinkedIn Tumblr

Rampal

ಚಂಡಿಗಡ, ನ.28: ಹರ್ಯಾಣದ ವಿವಾದಿತ ದೇವ ಮಾನವ ರಾಮ್‌ಪಾಲ್‌ನ ಬಂಧನ ಕಾರ್ಯಾ ಚರಣೆಗಾಗಿ ಸರಕಾರದ ಖಜಾನೆಗೆ 26 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ತಿಳಿಸಲಾಗಿದೆ.

ರಾಮ್‌ಪಾಲ್‌ನನ್ನು ಅವರನ್ನು ಶುಕ್ರವಾರ ಬಿಗಿ ಭದ್ರತೆಯ ನಡುವೆ ಹೈಕೋರ್ಟ್‌ನ ಮುಂದೆ ಹಾಜರುಪಡಿಸಲಾಯಿತು. ನ್ಯಾ.ಎಂ.ಜಯಪಾಲ್ ಮತ್ತು ನ್ಯಾ.ದರ್ಶನ್ ಸಿಂಗ್‌ರಿದ್ದ ಪೀಠವು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು. ಅಲ್ಲದೆ ಅಂದು ಉಳಿದ ಆರೋಪಿಗಳಾದ ರಾಮ್‌ಪಾಲ್ ಢಾಕಾ ಮತ್ತು ಒ.ಪಿ.ಹೂಡಾ ಎಂಬವರನ್ನೂ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು.

ರಾಮ್‌ಪಾಲ್‌ನ ಬಂಧನಕ್ಕಾಗಿ ಹಿಸ್ಸಾರ್‌ನ ಸತ್ಲೋಕ್ ಆಶ್ರಮದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯ ಕುರಿತಾದ ವರದಿಯನ್ನು ಹರ್ಯಾಣ ಡಿಜಿಪಿ ಎಸ್.ಎನ್.ವಶಿಷ್ಠ ಈ ಸಂದರ್ಭದಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು.

ರಾಮ್‌ಪಾಲ್ ಬಂಧನ ಕಾರ್ಯಾಚರಣೆಗಾಗಿ ಹರ್ಯಾಣ, ಪಂಜಾಬ್ ಸರಕಾರಗಳು, ಚಂಡಿಗಡ ಆಡಳಿತ ಮತ್ತು ಕೇಂದ್ರ ಸರಕಾರ ಮಾಡಿದ ವೆಚ್ಚಗಳ ಕುರಿತಾದ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಯಿತು. ಅದರ ಪ್ರಕಾರ ಹರ್ಯಾಣ ಸರಕಾರವು 15.43 ಕೋಟಿ ರೂಪಾಯಿ, ಪಂಜಾಬ್ 4.34 ಕೋಟಿ ರೂ., ಚಂಡಿಗಡ ಆಡಳಿತವು 3.29 ಕೋಟಿ ರೂ. ಹಾಗೂ ಕೇಂದ್ರ ಸರಕಾರ 3.55 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ ಎಂದು ತಿಳಿಸಲಾಗಿದೆ.

ಈ ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗಳ ವೈದ್ಯಕೀಯ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠವು ಡಿಜಿಪಿಗೆ ಆದೇಶಿಸಿದೆ. ಅಲ್ಲದೆ ಸತ್ಲೋಕ್ ಆಶ್ರಮದಲ್ಲಿ ಹಿಂಸಾಚಾರ ನಡೆಸಿ ಬಂಧನಕ್ಕೊಳಗಾಗಿರುವ 909 ವ್ಯಕ್ತಿಗಳ ಹಿನ್ನೆಲೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

Write A Comment