ರಾಷ್ಟ್ರೀಯ

ಭೋಪಾಲ್ ಅನಿಲ ದುರಂತ: ಸಂತ್ರಸ್ತರಿಗೆ ಪರಿಹಾರದ ಭರವಸೆ, ಸತ್ಯಾಗ್ರಹ ಅಂತ್ಯ

Pinterest LinkedIn Tumblr

Jantar_Mantar

ನವದೆಹಲಿ: ಭೋಪಾಲ್ ಅನಿಲ ದುರಂತದಲ್ಲಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಕೇಂದ್ರ ಸರ್ಕಾರ ಶನಿವಾರ ಭರವಸೆ ನೀಡಿದೆ.

ಭೋಪಾಲ್ ಅನಿಲ ದುರಂತದಲ್ಲಿ ಬದುಕುಳಿದವರ ಮತ್ತು ಸಂಕಷ್ಟಕ್ಕೀಡಾದವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಆಮರಣಾಂತ ಉಪವಾಸ ಇಂದು ಕೊನೆಗೊಂಡಿದ್ದು, ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರದ ಆಶ್ವಾಸನೆ ದೊರೆತ ಹಿನ್ನಲೆಯಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ 5 ಮಹಿಳೆಯರು ಮತ್ತು ಅವರ ಬೆಂಬಲಿಗರು ಇಂದು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ನವೆಂಬರ್ 10ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿಲ ದುರಂತದ ಸಂತ್ರಸ್ತ ಕುಟುಂಬದ ಮಹಿಳೆಯರು ಉಪವಾಸ ಸತ್ಯಾಗ್ರ ಕೈಕೊಂಡಿದ್ದರು. ಸಂತ್ರಸ್ತ ಕುಟುಂಬಗಳಿಗೆ ಕನಿಷ್ಟ 1 ಲಕ್ಷ ರುಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ವಿಚಾರ ತಿಳಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಅನಂತ್ ಕುಮಾರ್ ಅವರು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಭರವಸೆ ನೀಡಿದ ಹಿನ್ನಲೆಯಲ್ಲಿ ಮಹಿಳೆಯರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

‘ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ನೀಡಿದ್ದು, ಅನಿಲ ದುರಂತ ಪೀಡಿತ ಕುಟುಂಬದವರ ಎಲ್ಲ ರೀತಿಯ ವೈದ್ಯಕೀಯ ಭತ್ಯೆಗಳನ್ನು ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಭೋಪಾಲ್ ಅನಿಲ ದುರಂತ ಪೀಡಿತ ಮಹಿಳಾ ಸಂಘದ ಅಧ್ಯಕ್ಷೆ ರಷೀದಾ ಬೀ ಅವರು ಹೇಳಿದ್ದಾರೆ.

Write A Comment