ಮಂಗಳೂರು, ನ.14: ಗೇಮ್ಸ್, ರೈಮ್ಸ್ ಜೊತೆಯಲ್ಲಿ ಆಂಗ್ಲ ಭಾಷಾ ಕಲಿಕೆ… ಪರಸ್ಪರ ಸಂವಾದ, ಕತೆ ಪುಸ್ತಕ ಓದುವ ಮೂಲಕ ಭಾಷಾ ಜ್ಞಾನ ಹೆಚ್ಚಿಸುವ ಪ್ರಯತ್ನ. ಆ ಮೂಲಕ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಇಂಗ್ಲಿಷ್ ಜ್ಞಾನ ವರ್ಧನೆಗೆ ಅವಕಾಶ ನೀಡಲು ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಹಾಗೂ ಅರ್ಲಿ ಲರ್ನಿಂಗ್ ಸೆಂಟರ್ ಮತ್ತು ಸೈಂಟ್ ಆ್ಯಗ್ನೆಸ್ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸರಕಾರಿ ಶಾಲಾ ವಿದ್ಯಾರ್ಥಿಗಳ ಆಂಗ್ಲ ಭಾಷಾ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ‘ಇಂಗ್ಲಿಷ್ ಕಲಿ-ಪ್ರಪಂಚ ತಿಳಿ’ ಇಂಗ್ಲಿಷ್ ಕಲಿಕೆಯ ವಿಶೇಷ ಕಾರ್ಯಕ್ರಮ ಡಿ.1ರಿಂದ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರ್ಲಿ ಲರ್ನಿಂಗ್ ಸೆಂಟರ್ನ ಸಂಯೋಜಕಿ ಸೋನಿಯಾ ಮೊರಾಸ್, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯ ಗುಣಮಟ್ಟ ಕಡಿಮೆ ಇರುತ್ತದೆ. ಆಧುನಿಕ ಯುಗದಲ್ಲಿ ಎಲ್ಲಾ ವ್ಯವಹಾರಗಳಿಗೆ ಮುಖ್ಯವಾಗಿ ಬೇಕಾಗಿರುವುದು ಇಂಗ್ಲಿಷ್ ಭಾಷಾ ಜ್ಞ್ಞಾನ. ಶಾಲಾ ಮಟ್ಟದಲ್ಲೇ ಆಂಗ್ಲ ಭಾಷಾ ಜ್ಞಾನ ರೂಢಿಸಿಕೊಂಡರೆ ಭವಿಷ್ಯ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಮಾತನಾಡಿ, ಸರಕಾರಿ ಶಾಲಾ ಮಕ್ಕಳು ಇಂಗ್ಲಿಷ್ನಲ್ಲಿ ಸುಲಲಿತವಾಗಿ ಮಾತನಾಡಬೇಕು ಎಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರದ ಗಾಂಧಿನಗರ, ಮಣ್ಣಗುಡ್ಡ, ಕೋಡಿಕಲ್, ಕಾವೂರು, ಸುರತ್ಕಲ್ ಮೊದಲಾದ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರು ಈಗಾಗಲೇ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
1ರಿಂದ 8ನೆ ತರಗತಿವ ರೆಗಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಾರ್ಯ ಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ಶಾಲಾ ಸಮಯವನ್ನು ನೋಡಿಕೊಂಡು ವಾರದಲ್ಲಿ ಒಂದು ಗಂಟೆ 40 ಸ್ವಯಂಸೇವಕರು ವಿವಿಧ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲಿದ್ದಾರೆ. ಪ್ರಾರಂಭಿಕ ಪ್ರತಿಕ್ರಿಯೆ ನೋಡಿಕೊಂಡು ಜಿಲ್ಲೆಯ ಇತರೆಡೆಗೂ ಕಾರ್ಯ ಕ್ರಮ ವಿಸ್ತರಿಸುವ ಚಿಂತನೆಯಿದೆ ಎಂದರು. ಕಾವ್ಯಾ ಉಪಸ್ಥಿತರಿದ್ದರು.


