ಕರಾವಳಿ

ಕಾಳಾವರ ಶ್ರೀ ಕಾಳಿಂಗ ದೇವಸ್ಥಾನದಲ್ಲಿ ಸ್ಕಂದ ಷಷ್ಠಿ ಉತ್ಸವ- ಸುತ್ತು ಪೌಳಿಗೆ ಶಿಲಾನ್ಯಾಸ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ಸುಬ್ರಮಣ್ಯ ದೇವಸ್ಥಾನದಲ್ಲಿ ಸ್ಕಂದ (ಕಿರು) ಷಷ್ಠಿ ಉತ್ಸವ ಮತ್ತು ದೇವಸ್ಥಾನದ ಸುತ್ತು ಪೌಳಿ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವು ಬುಧವಾರದಂದು ನಡೆಯಿತು.

ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಯಾವುದೇ ಉತ್ತಮ ಕೆಲಸವಾಗಲು ಯೋಗ ಬೇಕಿದೆ. ಆ ಯೋಗವನ್ನು ಸದ್ಬಳಕೆ ಮಾಡಿಕೊಂಡು ಅವಶ್ಯಕವಾದ ಜೀರ್ಣೋದ್ಧಾರ ಕಾರ್ಯ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಶೂನ್ಯ ರಾಜಕೀಯವಾಗಿದ್ದಾಗ ಸಮಗ್ರ ವ್ಯವಸ್ಥೆಯು ಸುಸೂತ್ರವಾಗಿ ನಡೆಯುತ್ತದೆ ಎಂದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಕಲಿಯುಗದಲ್ಲಿ ಭಕ್ತರು ಕೇಳುವ ವರವನ್ನು ಕರುಣಿಸುವ ಸುಬ್ರಮಣ್ಯ ದೇವಸ್ಥಾನವು ಉತ್ತಮ ಆದಾಯವನ್ನು ತಂದುಕೊಂಡುತ್ತಿದೆ. ಕುಂದಾಪುರ ತಾಲೂಕಿನ ಬಲಿಷ್ಟವಾದ ಕಾಳಿಂಗ ದೇವಸ್ಥಾನವು ನಾಡಿನ ಮಹತ್ತರ ದೇವಸ್ಥಾನಗಳಲ್ಲಿ ಒಂದಾಗಲಿದೆ. ಪ್ರಸ್ತುತ ಜನರು ಜನರನ್ನು ನಂಬುವುದನ್ನು ಕಡಿಮೆ ಮಾಡಿದ್ದು ದೇವರನ್ನು ನಂಬುವ ಪರಿಕಲ್ಪನೆ ಹೆಚ್ಚಿದೆ ಎಂದರು.

ಮುಜರಾಯಿ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಳಾವರದ ಶ್ರೀ ಕಾಳಿಂಗ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ್ ಎನ್. ಶೆಟ್ಟಿ, ಉದ್ಯಮಿ ಬಾಲಚಂದ್ರ ಶೆಟ್ಟಿ ನಾಯ್ಕರಮನೆ ಕಾಳಾವರ, ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ, ಕೋಟೇಶ್ವರ ಶ್ರೀ ಕೋಟಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ತಂತ್ರಿ ಕೃಷ್ಣ ಸೋಮಯಾಜಿ, ಅರ್ಚಕರಾದ ಸತ್ಯನಾರಾಯಣ ಪುರಾಣಿಕ ಮೊದಲಾದವರಿದ್ದರು.

ಇದೇ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಕೆ. ಕಾಳಾವರ್ಕರ್ ಬರೆದ ಚಿತ್ರಕಥೆಯನ್ನು ಸಭಾಪತಿಗಳು ಬಿಡುಗಡೆಗೊಳಿಸಿದರು. ಅಲ್ಲದೇ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.

ವ್ಯವಸ್ಥಾಪನ ಸಮಿತಿ ಸದಸ್ಯೆ ಕಲಾವತಿ ಪ್ರಾರ್ಥಿಸಿದರು. ಮಾಜಿ ತಾ.ಪಂ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ರತ್ನಾಕರ ಶೆಟ್ಟಿ ವಂದಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.