ಕರಾವಳಿ

‘ಸರಕಾರಿ ಶಾಲೆಯ ರಕ್ಷಕ’: ಉಡುಪಿ ಬಾರಾಳಿ ಶಾಲೆಯ ಶಿಕ್ಷಕ, ಮಕ್ಕಳ ವಾಹನಕ್ಕೂ ಇವರೇ ಚಾಲಕ!

Pinterest LinkedIn Tumblr

ಕುಂದಾಪುರ: ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಅದೆಷ್ಟೋ ಸರ್ಕಸ್ ಮಾಡಲಾಗ್ತಿದೆ. ಆದ್ರೂ ಕೂಡ ಖಾಸಗಿ ಶಾಲೆಗಳು ಹೆಚ್ಚುತ್ತಲೇ ಇದೆ. ಆದ್ರೆ ಗ್ರಾಮೀಣ ಭಾಗದ ಸರಕಾರಿ ಶಾಲೆ ಉಳಿಯಲೇಬೇಕೆಂಬ ಪಣ ತೊಟ್ಟು ಇಲ್ಲೊಬ್ಬ ಶಿಕ್ಷಕ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನದ ವಿಶೇಷ ವರದಿಯಿದು.

ಹೀಗೆ ಡ್ರೈವಿಂಗ್ ಗೂ ಸೈ….ಪಾಠ ಮಾಡೋಕು ಸೈ…ಆಟ ಹೇಳಿಕೋಡೋಕೂ ಸೈ ಅನ್ನೋ ಇವರ ಹೆಸರು ರಾಜಾರಾಮ್. ಮಂದರ್ತಿ ಸಮೀಪದ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಯಾಕೇ ಪಿ.ಟಿ. ಮಾಸ್ಟರ್ ಡ್ರೈವರ್ ಆದ್ರು ಅಂತಾ ಅನ್ಕೊಬೇಡಿ. ಈ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಜಾಸ್ಥಿ ಮಾಡೋದೆ ಅದರ ಹಿಂದಿರುವ ಉದ್ದೇಶ. ಪುಸ್ತಕ ಪೆನ್ನು, ಸ್ಕೇಲು, ಕ್ರೀಡೋಪಕರಣ ಹಿಡಿಯುವ ಕೈ ಸ್ಟೇರಿಂಗ್ ಹಿಡಿಯೋಕೆ ಸರಕಾರಿ ಶಾಲೆಯ ಮೇಲಿನ ಅತಿಯಾದ ಪ್ರೀತಿಯೇ ಕಾರಣ. ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಹಳೇ ವಿದ್ಯಾರ್ಥಿಗಳು, ಎಸ್‌ಡಿ‌ಎಂಸಿ ಸೇರಿ ದಾನಿಗಳ ಮೂಲಕ ವಾಹನ ವ್ಯವಸ್ಥೆ ಮಾಡಿದ್ದರು. ವಾಹನಕ್ಕೆ ಚಾಲಕ ಬೇಕು, ಚಾಲಕನಿಗೆ ಸಂಬಳ ಬೇಕು. ಇದು ಮತ್ತಷ್ಟು ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್ ತಾವೇ ವಾಹನಕ್ಕೆ ಚಾಲಕನಾಗಲು ಇಚ್ಛೆ ಪಟ್ಟರು. ಈಗ ಶಾಲೆಯಲ್ಲಿ 90 ವಿದ್ಯಾರ್ಥಿಗಳಿದ್ದಾರೆ. 60 ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿದಿನ 4 ಟ್ರಿಪ್ ಮಾಡಬೇಕು. ಹೊರಳಿಜೆಡ್ಡು, ಮುಸಪುರಿ, ಕಾಜ್ರಳ್ಳಿ, ಕಾರ್ತಿಬೆಟ್ಟು ಅಲ್ತಾರು ಮುಂತಾದೆಡೆಯಿಂದ 30 ಕಿ.ಮೀ.ಕ್ರಮಿಸಿ ಮಕ್ಕಳನ್ನು ಕರೆ ತರಬೇಕು. ಬೆಳಗ್ಗೆ 8.15ಕ್ಕೆ ಮನೆ ಬಿಡುವ ರಾಜಾರಾಮ್ 9.15ಕ್ಕೆ ಟ್ರಿಪ್ ಮುಗಿಸಿ ಶಾಲೆಗೆ ಹಾಜರಾಗುತ್ತಾರೆ. ಸಾಯಂಕಾಲವೂ ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದ ಬಳಿಕವೇ ಇವರು ಮನೆ ಸೇರುವುದು. ನಿತ್ಯ ಇವರಿಗೆ ಡಬ್ಬಲ್ ಡ್ಯೂಟಿ.

ಖಾಸಗಿ ಶಾಲೆಗಳಲ್ಲಿ ಸಾರಿಗೆ ಸಹಿತ ಮೂಲಸೌಲಭ್ಯ ಕಂಡು ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದರು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸಿತ್ತು.2017-18ರ ವರ್ಷಾರಂಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ, ನಿರ್ಮಿತಿ ಇಂಜಿನಿಯರ್ ಗಣೇಶ್ ಪ್ರಸಾದ್ ಶೆಟ್ಟಿ ಶ್ರಮದಿಂದ, ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಬಾರಾಳಿ ಅವರು ಟೆಂಪೊ ಟ್ರಾವೆಲರ್ ವಾಹನವನ್ನು ಶ್ರೀರಾಮ ಸೇವಾ ಸಮಿತಿ ಮೂಲಕ ಶಾಲೆಗೆ ಕೊಡುಗೆಯಾಗಿ ನೀಡಿದರು. ವಾಹನ ವ್ಯವಸ್ಥೆ ಮಾಡಿದ ನಂತರ ಏರಿಕೆಯಾಗಿದೆ. ಮಕ್ಕಳು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. 1ರಿಂದ 7ನೇ ತರಗತಿವರೆಗೆ ತರಗತಿ ಹೊಂದಿರುವ ಶಾಲೆಯಲ್ಲಿ ನಾಲ್ವರು ಸರ್ಕಾರಿ ಶಿಕ್ಷಕರು, ಓರ್ವ ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ 90 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿದಿನ 6 ಲೀಟರ್ ಡೀಸೆಲ್ ವಾಹನಕ್ಕೆ ಬೇಕು, ಡೀಸೆಲ್, ನಿರ್ವಹಣೆ ಖರ್ಚನ್ನು ಹಳೇ ವಿದ್ಯಾರ್ಥಿ ಸಂಘ ನೋಡಿಕೊಳ್ಳುತ್ತದೆ. ವಾಹನದ ಸಣ್ಣಪುಟ್ಟ ನಿರ್ವಹಣೆಯನ್ನು ಈ ದೈಹಿಕ ಶಿಕ್ಷಕರೇ ಮಾಡುತ್ತಾರೆ. ರಾಜರಾಮ್ ರಜೆಯಲ್ಲಿದ್ದಾಗ ಸ್ಥಳೀಯ ರಿಕ್ಷಾ ಚಾಲಕ ರಮೇಶ್ ವಾಹನ ಟ್ರಿಪ್ ಮಾಡುತ್ತಾರೆ. ಅಂದಹಾಗೆ ರಾಜಾರಾಮ್ ಈ ಶಾಲೆಯ ದೈಹಿಕ ಶಿಕ್ಷಣ ತರಬೇತುದಾರ. ಅದರ ಜೊತೆಗೆ ಗಣಿತ, ವಿಜ್ಞಾನ ಪಾಠ ಬೋಧಿಸುವ ಶಿಕ್ಷಕ. ಸದ್ಯ ಮಕ್ಕಳ ವಾಹನಕ್ಕೆ ಇವರೇ ಸಾರಥಿ. ಇದು ಅವರ ವ್ರತ್ತಿಯಾದರೆ ಪ್ರವ್ರತ್ತಿಯಾಗಿ ಕರಕುಶಲ ವಸ್ತುಗಳ ತರಬೇತುದಾರ, ಸಮಾಜಸೇವಕ. ಮನೆಯಿಂದ ಶಾಲೆಗೆ ಸೈಕಲ್ ಏರಿ ಬಂದು ಹೋಗ್ತಾರೆ.

ಸರಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಶಾಲಾ ವಾಹನದ ಚಾಲಕನಾಗುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿರುವ ರಾಜರಾಮ್ ಅವರಂತಹ ಶಿಕ್ಷಕರು ಸಮಾಜಕ್ಕೆ ಮಾದರಿ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.