ಕರ್ನಾಟಕ

ಸಂಬಂಧಗಳ ನಡುವೆ ಅಪರಿಚಿತರಂತೆ ಬದುಕುವ ಬಾಳು ನಮ್ಮದು… ನಿಜನಾ… ಸುಳ್ಳ್ಳಾ… ನೀವೆ ಹೇಳಿ..?

Pinterest LinkedIn Tumblr

joint-family_samllfamiy

ಮಂಗಳೂರು: ಜೀವನದಲ್ಲಿ ಏನೇ ಕಷ್ಟ-ಸುಖಗಳು ಬಂದರೂ ನಮ್ಮ ಕುಟುಂಬವು ನಮ್ಮೊಂದಿಗಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬದವರು ಮೊದಲ ಆಸರೆಯಾಗಿರುತ್ತಾರೆ. ಹೇಳಿಕೇಳಿ ನಮ್ಮದು ಅವಿಭಕ್ತ ಕುಟುಂಬ. ದೊಡ್ಡ ತುಂಬು ಸಂಸಾರ. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಮಕ್ಕಳು ಹೀಗೆ 20ಕ್ಕೂ ಹೆಚ್ಚು ಮಂದಿ ಇರುವ ದೊಡ್ಡ ಕುಟುಂಬವಾಗಿತ್ತು. ಇನ್ನು ನಾವಂತು ಮಕ್ಕಳು ನಮ್ಮದೇ ಸಾಮ್ರಾಜ್ಯ. ಗೌಜಿ, ಗದ್ದಲವೆಲ್ಲ ಇದ್ದದ್ದೆ. ಆದರೂ ಏನೋ ಒಂದುಥರ ಖುಷಿ. ಅಮ್ಮನ ಕೈತುತ್ತು, ಅಪ್ಪನ ಕಿವಿಮಾತು, ಅಜ್ಜಿಯ ಕಾಗಕ್ಕ-ಗುಬ್ಬಕ್ಕನ ಕತೆ, ಅಜ್ಜನ ಮನೆಯ ಜವಬ್ದಾರಿ. ಒಬ್ಬರಿಗೆ ಕಷ್ಟ ಬಂದರೆ ಸಾಕು ತಮಗೇ ಬಂದಿದ್ದೇನೋ ಎಂಬಂತೆ ಸಹಾಯಕ್ಕೆ ಬರುತ್ತಿದ್ದರು. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಅಲ್ಲಿ ಹಿರಿಯರ ಮಾತೇ ಅಂತಿಮ ನಿರ್ಣಯ. ಅವರ ಮಾತನ್ನು ಉಲ್ಲಂಘಿಸುವವರಿಲ್ಲ. ಅಲ್ಲಿ ಚಿಕ್ಕವರು ದೊಡ್ಡವರೆಂಬ ಕೀಳರಿಮೆಯಿಲ್ಲ ಎಲ್ಲರೂ ಒಂದೇ.

ಹಬ್ಬ ಹರಿದಿನಗಳು ಬಂದರೆ ಸಾಕು ಮನೆಯಲ್ಲಾ ಸಂಪೂರ್ಣ ಅಲಂಕಾರ. ಬಗೆ ಬಗೆಯ ತಿಂಡಿ ತಿನಿಸುಗಳು, ಅಜ್ಜಿಯ ಚಕ್ಕುಲಿ, ನಿಪ್ಪಟ್ಟು ವಾಹ್! ಎಲ್ಲರೂ ಸಮಯಕ್ಕೆ ಸರಿಯಾಗಿ ಕೂತು ಒಟ್ಟಿಗೆ ಹರಟುತ್ತಾ, ಹಂಚಿ ಊಟಮಾಡುವುದರಲ್ಲಿ ಮಜವೇ ಬೇರೆ. ಆದರೆ ಇಂದಿನ ದಿನಗಳಲ್ಲಿ ಕುಟುಂಬದ ಮಾದರಿಯು ತುಂಬಾ ಬದಲಾಗಿದೆ. ಹಿಂದೆ ತುಂಬಾ ಜನರಿಂದ ಕೂಡಿದ ಅವಿಭಕ್ತ ಕುಟುಂಬವಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಎಲ್ಲವೂ ಬದಲಾಗಿದೆ. ವಿಭಕ್ತ ಕುಟುಂಬಗಳು ಹೆಚ್ಚಿವೆ. ಅವಿಭಕ್ತ ಕುಟುಂಬ ಇಂದು ದೊಡ್ಡ ಹೊರೆ ಮತ್ತು ಹಲವರಿಗೆ ಸಮಸ್ಯೆಯಾಗುತ್ತಿದೆ.

ಕುಟುಂಬದಲ್ಲಿ ಬದಲಾವಣೆಗಳಾಗುತ್ತಿರುವುದು ಯಾಕೆಂದು ನಾವು ಗಮನಹರಿಸಬೇಕಾಗಿದೆ. ಅವಿಭಕ್ತ ಕುಟುಂಬದಲ್ಲಿ ವಾಸಿಸಿದರೆ ಹಲವಾರು ರೀತಿಯ ಲಾಭಗಳಿವೆ. ಇನ್ನೊಂದು ಕಡೆಯಲ್ಲಿ ಕೆಲವೊಂದು ಅನಾನುಕೂಲಗಳು ಕೂಡ. ಕೂಡುಕುಟುಂಬಕ್ಕೆ ಬಂದರೆ ಅಲ್ಲಿ ಹಿರಿಯ ವ್ಯಕ್ತಿಯೊಬ್ಬರು ಮನೆಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಅವರು ಶಿಸ್ತುಬದ್ಧವಾಗಿ ಕುಟುಂಬವನ್ನು ನಿಯಂತ್ರಿಸುತ್ತಿರುತ್ತಾರೆ. ಇಂತಹ ಕುಟುಂಬಗಳಲ್ಲಿ ಸಾಂಪ್ರದಾಯ ಬದ್ಧ ವರ್ತನೆ ಪ್ರಚಲಿತದಲ್ಲಿರುತ್ತದೆ.

`ಕೂಡಿ ಬಾಳಿದರೆ ಸ್ವರ್ಗಸುಖ’ ಎನ್ನುತ್ತಾರೆ ನಮ್ಮ ಹಿರಿಯರು. ಕೂಡಿ ಬಾಳುವುದರಲ್ಲಿರುವ ಪ್ರೀತಿ, ಪ್ರೇಮ, ಭದ್ರತೆ, ಕೊಡು-ಕೊಳ್ಳುವಿಕೆ ಮತ್ತು ಬಾಂಧವ್ಯ ವಿಭಕ್ತ ಕುಟುಂಬದಲ್ಲಿ ಕಂಡುಬರುವುದಿಲ್ಲ. ಈಗ ಒಂದು ಮನೆಯಲ್ಲಿ ಗಂಡ-ಹೆಂಡತಿಗೆ ಎರಡು ಮಕ್ಕಳು ಅಥವಾ ಒಂದೇ ಒಂದು ಮಗು. ಎಷ್ಟೋ ಮಕ್ಕಳಿಗೆ ನಮ್ಮ ಸಂಬಂಧಿಕರು ಯಾರು ಎಂಬುದೇ ಗೊತ್ತಿರುವುದಿಲ್ಲ!

ಒಂದೇ ಮನೆಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಮುಖಕೊಟ್ಟು ಮಾತನಾಡಲು ಈಗೀಗ ಪುರುಸೊತ್ತು ಇರುವುದಿಲ್ಲ. ಶಿಫ್ಟ್ ವರ್ಕ್, ಕೆಲಸದ ಒತ್ತಡ, ಕೆಲಸದ ವಿಷಯದಲ್ಲಿ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ, ಇರುವ ಒಬ್ಬ ಮಗ ಅಥವಾ ಮಗಳು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಹೋಗಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಎಲ್ಲೋ ಒಂದು ಕಡೆ ಕೌಟುಂಬಿಕ ಭಾವನೆ, ಆತ್ಮೀಯತೆ ಕಡಮೆಯಾಗುತ್ತಿದೆ ಅಲ್ಲವೇ? ಇದೇ ಕಾರಣದಿಂದ ಎಷ್ಟೋ ಜನರಿಗೆ ಎಲ್ಲರು ಇದ್ದರೂ ತಾನು ಒಂಟಿ ಎಂದು ಅನಿಸುತ್ತಿರುತ್ತದೆ. ಹಾಗಾಗಿ ಒಂಟಿತನವನ್ನು ಕಳೆಯಲು ಸಾಮಾಜಿಕ ಜಾಲಾತಾಣಗಳಲ್ಲಿ ಸಮಯವನ್ನು ಕಳೆಯುತ್ತಾರೆ. ಕೆಲಸದ ಒತ್ತಡ ಅಥವಾ ಮತ್ಯಾವುದೋ ಒಂದು ಕಾರಣದಿಂದ ಕುಟುಂಬಸ್ಥರೇ ನಮಗೆ ಅಪರಿಚಿತರಾಗಬಹುದು.

ಮೊದಲೆಲ್ಲ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಮಕ್ಕಳು ಓದಿ ಕುಣಿದು ನಲಿದು ತಮ್ಮ ಹಿರಿಯರ ಅನ್ಯೋನ್ಯತೆಯನ್ನು ನೋಡಿ ತಾವೂ ಒಟ್ಟಿಗೆ ಇರಬೇಕೆಂಬ ಅಂಶವನ್ನು ಕಲಿಯುತಿದ್ದರು. ಆದರೆ ಈಗಿನ ಕೆಲಸದೊತ್ತಡವೋ ಅಥವಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವೋ ತಿಳಿಯದು, ಎರಡು-ಮೂರು ವರ್ಷದಲ್ಲೇ ಮಕ್ಕಳನ್ನು ಸಾವಿರಾರು ರೂಪಾಯಿ ಕೊಟ್ಟು ಪ್ಲೇಹೋಮ್‌ಗೆ ಕಳುಹಿಸಿಬಿಡುತ್ತಾರೆ. ಏನನ್ನೂ ಅರಿಯದ ಈ ಪುಟ್ಟ ವಯಸ್ಸಿನಲ್ಲಿ ಮಗು ತಂದೆ-ತಾಯಿಯ ಪ್ರೀತಿಯನ್ನು ಕಳೆದುಕೊಂಡುಬಿಡುತ್ತದೆ. ಅವಿಭಕ್ತ ಕುಟುಂಬದಲ್ಲಾದರೆ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಲು ಒಬ್ಬರಲ್ಲದಿದ್ದರೆ ಮತ್ತೊಬ್ಬರಿರುತ್ತಿದ್ದರು. ಮನೆಯಲ್ಲೇ ಆಟ ಓದು ಪೂರ ನಡೆಯುತಿತ್ತು.

ಇನ್ನು ಕೆಲವು ಮನೆಗಳಲ್ಲಿಯಂತೂ ಅಪ್ಪ-ಅಮ್ಮ, ಮಕ್ಕಳು ಜೊತೆಯಲ್ಲಿ ಕೂತು ಊಟಮಾಡಿ ತುಂಬಾ ಕಾಲವಾಗಿರುತ್ತದೆ! ಈ ರೀತಿ ಇದ್ದರೆ ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಬೆಳೆದುಬಿಡುತ್ತದೆ. ಹಾಗೆ ಆಗಲು ಬಿಡಬಾರದು. ಕೆಲಸದ ಒತ್ತಡ ಬದಿಗಿಟ್ಟು ವಾರದಲ್ಲಿ ಕನಿಷ್ಠ ೨-೩ ಬಾರಿಯಾದರೂ ಮನೆಯಲ್ಲಿ ಎಲ್ಲರು ಒಟ್ಟಿಗೆ ಕುಳಿತು ಊಟಮಾಡುವುದು, ಹಳೆಯದನ್ನು ನೆನೆದು ಖುಷಿಪಡುವುದು, ಒಬ್ಬರ ಕಷ್ಟ-ಸುಖವನ್ನು ಹಂಚಿಕೊಳ್ಳುವುದರಿಂದ ಸಂಬಂಧ ಗಟ್ಟಿಯಾಗಿರುತ್ತದೆ.

ಚಿಕ್ಕ ಮಕ್ಕಳಿದ್ದರೆ ಅವರ ಜೊತೆ ಆಟವಾಡಿ, ಇದರಿಂದ ಮಾನಸಿಕ ಒತ್ತಡ ಕಡಮೆಯಾಗುತ್ತದೆ, ಅಲ್ಲದೆ ನಿಮ್ಮ ಮತ್ತು ಮಕ್ಕಳ ನಡುವೆ ಬಾಂಧವ್ಯ ಹೆಚ್ಚಾಗುವುದು. ಅವರೊಂದಿಗೆ ಮನಸ್ಸುಬಿಚ್ಚಿ ಮಾತಾಡಿ, ಅವರೊಂದಿಗೆ ಸಮಯ ಕಳೆಯುವಾಗ ನಿಮ್ಮ ಕೆಲಸದೊತ್ತಡವನ್ನು ಮಧ್ಯೆ ತರಬೇಡಿ. ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ಫ್ಯಾಮಿಲಿ ಔಟಿಂಗ್ ಹೋದರೆ ಕುಟುಂಬದವರ ಜೊತೆ ಅನುಬಂಧ ಹೆಚ್ಚುತ್ತದೆ. ಈಗೇನಿದ್ದರೂ ನಾನು-ನನ್ನ ಕುಟುಂಬ ಎಂಬ ಭಾವನೆಯಲ್ಲಿ ಜೀವಿಸುವವರೇ ಜಾಸ್ತಿ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಕಾರಣವೋ ಅಥವಾ ಸಂಸ್ಕಾರದ ಕೊರತೆಯೋ ಅಥವಾ ಸ್ವಾರ್ಥವೋ?

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು. ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಕುಟುಂಬದ ಹುಟ್ಟು
ಮನುಷ್ಯ ಆಹಾರ ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆ ಕಲಿತ ನಂತರಕುಟುಂಬ ಪದ್ಧತಿ ಹುಟ್ಟಿಕೊಂಡಿರಬಹುದು ಎಂಬುದು ಒಂದು ವಾದ. ಪೂರ್ವದಲ್ಲಿ ಮನುಷ್ಯ ಆಹಾರ ಬೇಕಾದಾಗ ಮಾತ್ರ ಹುಡುಕಿ ಅಥವಾ ಬೇಟೆಯಾಡಿ ತಿನ್ನುತ್ತಿದ್ದ. ಎಲ್ಲೆಂದರಲ್ಲಿ ಮಲಗುತ್ತಿದ್ದ. ಅತ್ಯಂತ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆಹಾರವನ್ನು ಸಂಗ್ರಹಿಸಿ, ಸಂರಕ್ಷಿಸಲು ಕಲಿತ ಮೇಲೆ ಬಹುಶಃ ಒಂದು ನೆಲೆಯನ್ನು ಕಂಡುಕೊಳ್ಳುವುದು ಅವಶ್ಯಕವಾಯಿತು. ಹೀಗೆ ಒಂದು ಜಾಗವನ್ನು ‘ಮನೆ’ ಎಂದು ಗುರುತಿಸಿಕೊಂಡಮೇಲೆ, ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಅರಸುವುದರ ಬದಲು, ಸಂಗಾತಿಯೊಡನೆ ಒಪ್ಪಂದ ಮಾಡಿಕೊಂಡ. ಹೀಗೆ ಕುಟುಂಬದ ಮೊದಲ ಕಲ್ಪನೆ ಹುಟ್ಟಿತೆನ್ನಬಹುದು.

ಬೆಳವಣಿಗೆ
ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದವು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಓಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ
ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ
ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ.

ವಿಭಕ್ತ ಕುಟುಂಬ
ಔದ್ಯೋಗಿಕ ಕ್ರಾಂತಿಯಿಂದಾಗಿ ಜನರ ವಲಸೆ ಹೆಚ್ಚಾದಂತೆಲ್ಲ ದೊಡ್ಡ ಕುಟುಂಬಗಳು ಒಡೆಯಲಾರಂಭಿಸಿದವು. ಆಗ ದಂಪತಿ-ಮಕ್ಕಳ ವಿಭಕ್ತ ಕುಟುಂಬ ಹುಟ್ಟಿಕೊಂಡಿತು.

ಏಕ ಪೋಷಕ ಕುಟುಂಬ
ವಿದೇಶಿ ಸಂಸ್ಕೃತಿಯ ಪ್ರಭಾವ, ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಿಂದಾಗಿ ಏಕಪೋಷಕ ಕುಟುಂಬಗಳು ಹುಟ್ಟಿಕೊಳ್ಳುತ್ತಿವೆ. ಹೆಚ್ಚಿನ ಸಂದರ್ಭಗಳಲ್ಲಿ ತಾಯಿ ಮಗುವಿನ ಕುಟುಂಬವೇ ನಿರ್ಮಾಣವಾಗುತ್ತದೆ.

ಸಂಬಂಧಗಳು
ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

Comments are closed.