ಕರಾವಳಿ

‘ಎರ್ನಾಕುಲಂ-ಪುಣೆ ರೈಲು’ ಕುಂದಾಪುರದಲ್ಲಿ ನಿಲುಗಡೆ: ಪ್ರತಾಪಸಿಂಹಗೆ ಜೈಕಾರ ಕೂಗಿ ಅದ್ಧೂರಿ ಸ್ವಾಗತ (Video)

Pinterest LinkedIn Tumblr

ಕುಂದಾಪುರ: ಹಲವು ವರ್ಷಗಳ ಹೋರಾಟದ ಬಳಿಕ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರ ಕಾಳಜಿಯಲ್ಲಿ ಎರ್ನಾಕುಲಂ- ಪುಣೆ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದ್ದು ಮಂಗಳವಾರ ಮಧ್ಯಾಹ್ನ ಪ್ರಥಮ ‌ನಿಲುಗಡೆ ಹಿನ್ನೆಲೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಹಾಗೂ ಜೈ ಭಾರ್ಗವ ಬಳಗದ ವತಿಯಿಂದ ರೈಲನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

 

ಈ ಸಂದರ್ಭ ಮಾತನಾಡಿದ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಪನ್ವೇಲ್ ಮೂಲಕ ಹೋಗುವ ಈ ರೈಲು ಪುಣೆ, ಗೋವಾ, ಪನ್ವೇಲ್ ಹೋಗುವವರಿಗೆ ಅನುಕೂಲವಾಗಲಿದ್ದು ಮಾತ್ರವಲ್ಲದೇ ಕೇರಳದಿಂದ ಕೊಲ್ಲೂರಿಗೆ ಆಗಮಿಸುವ ಭಕ್ತರಿಗೂ ಅನುಕೂಲವಾಗುತ್ತೆ. ಈ ಸಮಿತಿ ಹುಟ್ಟಿಕೊಂಡ 9 ವರ್ಷದಲ್ಲಿ ಕುಂದಾಪುರದಲ್ಲಿ ಒಟ್ಟು 17 ರೈಲುಗಳಿಗೆ ನಿಲುಗಡೆ ಸಿಕ್ಕಿದೆ, ಈ ಹೋರಾಟಕ್ಕೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಹಲವರು ಸಹಕಾರ ನೀಡಿದ್ದಾರೆ. ಸದ್ಯ ಅಜಿತ್ ಕಿರಾಡಿ, ಗೌತಮ್ ಶೆಟ್ಟಿಯವರು ನಮ್ಮ ಜೊತೆ ಕೈಜೋಡಿಸಿದ್ದು ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.

ಜೈ ಭಾರ್ಗವ ಬಳಗದ ಅಜಿತ್ ಶೆಟ್ಟಿ ಕಿರಾಡಿ ಮಾತನಾಡಿ, ಕರಾವಳಿ ರೈಲು ಹಳಿಗಳು ಕರಾವಳಿ ಭಾಗಕ್ಕೆ ಅನುಕೂಲವಾದಾಗ ಮಾತ್ರವೇ ನಿಜವಾದ ಸಾರ್ಥಕತೆ ಸಿಗಲಿದೆ. ಆರು ತಿಂಗಳ ಹಿಂದೆ ಸಂಸದ ಪ್ರತಾಪ ಸಿಂಹ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿದ್ದೆ. ಅವರು ಮುತುವರ್ಜಿಯಲ್ಲಿ ಈ ರೈಲು ನಿಲುಗಡೆಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕುಂದಾಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಂಬಂದಪಟ್ಟವರ ಗಮನ ಸೆಳೆಯೋಣ. ಇನ್ನು ವಿಶೇಷ ರೈಲು ನಿಯೋಜನೆ ಬಗ್ಗೆಯೂ ನಮ್ಮ ಸಂಘಟನೆ ಹೋರಾಡುತ್ತಿದೆ ಎಂದರು.

ಪ್ರಥಮ ಬಾರಿ ಕುಂದಾಪುರದಲ್ಲಿ ನಿಲುಗಡೆಗೊಂಡ ರೈಲನ್ನು ಪುಷ್ಪ ನಮನದೊಂದಿಗೆ ಬರಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಲಾಯಿತು.

ಈ ಸಂದರ್ಭ ತಾ.ಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಕಾರ್ಯದರ್ಶೀ ಪ್ರವೀಣ್ ಟಿ., ಉಪಾಧ್ಯಕ್ಷರಾದ ಪದ್ಮನಾಭ ಶೆಣೈ, ರಾಜೇಶ್ ಕಾವೇರಿ, ಖಜಾಂಚಿ ಉದಯ ಭಂಡಾರ್ಕರ್, ಸಂಚಾಲಕ ವಿವೇಕ್ ನಾಯಕ್, ಜಾಯ್ ಕರ್ವೆಲ್ಲೋ, ಧರ್ಮಪ್ರಕಾಶ್, ಸುಧಾಕರ ಶೆಟ್ಟಿ, ತ್ರಿವಿಕ್ರಮ್ ಪೈ, ಶ್ರೀಧರ್ ಸುವರ್ಣ, ನಾಗೇಶ್ ಶೆಣೈ, ನರೇಂದ್ರ ಕುಮಾರ್, ನಾಗರಾಜ್ ಆಚಾರ್, ಎಚ್.ಎಸ್. ಹತ್ವಾರ್, ಶ್ರೀಶನ್, ರಾಘವೇಂದ್ರ ಶೇಟ್, ಜೈ ಭಾರ್ಗವ ಬಳಗದ ಪ್ರವೀಣ್ ಯಕ್ಷಿಮಠ, ವಸಂತ್ ಗಿಳಿಯಾರ್, ಅವಿನಾಶ್ ಬೆಳ್ವೆ, ಅವಿನಾಶ್ ದೊಡ್ಮನೆ ಮೊದಲಾದವರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.