ಕರಾವಳಿ

ಕೊಲ್ಲೂರಿಗೆ ಬರುವಾಗ ಕೋಟ್ಯಾಧಿಪತಿ, ಹೋಗುವಾಗ ದಿವಾಳಿ: ಶಾಸಕ ಬಿ.ಎಂ.ಎಸ್. ಮಾತಿನ ಒಳಗುಟ್ಟೇನು?(Video)

Pinterest LinkedIn Tumblr

ಕುಂದಾಪುರ: ತನಗೆ ಶಾಸಕನಾಗಿದಕ್ಕಿಂತಲೂ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಆಡಳಿತ ಸಮಿತಿಯ ಆಡಳಿತ ಮೊಕ್ತೇಸರನಾಗಿ ಸೇವೆ ಸಲ್ಲಿಸಿರುವುದು ಜಿವನದ ಅತ್ಯಂತ ಸಂತೃಪ್ತಿಗೆ ಕಾರಣವಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ. ಕ್ಷೇತ್ರದಲ್ಲಿ ಮಾಜಿ ಧರ್ಮದರ್ಶಿಯಾಗಿರುವ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಕೊಲ್ಲೂರು ಜಗತ್ಪ್ರಸಿದ್ಧವಾಗಬೇಕೆಂಬ ಕನಸು ಕಂಡಿದ್ದಾರೆ. ತಮ್ಮ ಅವಧಿಯಲ್ಲಿ ಆದ ಹಲವು ಯೋಜನಗಳ ಬಗ್ಗೆಯೂ ಅವರು ಮಾತನಾಡಿದ್ದು ಸನ್ನಿಧಿಗೆ ಬರುವ ಭಕ್ತರನ್ನು ಪ್ರೀತಿಸಿ ಎಂದು ವ್ಯವಸ್ಥಾಪನ ಸಮಿತಿಗೆ ಹಾಗೂ ದೇವಸ್ಥಾನದ ನೌಕರರಿಗೆ ಸಂದೇಶ ರವಾನಿಸಿದ್ದಾರೆ.

ಕೊಲ್ಲೂರಿನಲ್ಲಿ ಮಾತನಾಡಿದ ಅವರು, ಹಿಂದೆ ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರನಾಗಿ ಬರುವ ಕೋಟ್ಯಾಂತರ ರೂಪಾಯಿ ಆದಾಯ ಇದ್ದ ನಾನು ಅವಧಿ ಮುಗಿಸಿ ಹೋಗುವಾಗ ನನ್ನ ಬ್ಯಾಂಕ್‌ ಬ್ಯಾಲೇನ್ಸ್‌ ಖಾಲಿಯಾಗಿತ್ತು ಅಕ್ಷರಶಃ ನಾನು ದಿವಾಳಿಯಾಗಿದ್ದೆ. ಶ್ರೀ ದೇವಿಯ ಸೇವೆಯನ್ನು ಆತ್ಮ ಪೂರ್ವಕವಾಗಿ ಮಾಡಿದ ಸಂತೃಪ್ತಿ ಇದೆ. ರಾಜ್ಯದಲ್ಲಿಯೇ 24 ಕ್ಯಾರೆಟ್‌ ಚಿನ್ನದಲ್ಲಿ ನಿರ್ಮಾಣವಾದ ಚಿನ್ನದ ರಥ ಎನ್ನುವ ಹೆಗ್ಗಳಿಕೆ ಕೊಲ್ಲೂರಿನ ಚಿನ್ನದ ರಥಕ್ಕೆ ಇದೆ. ಚಿನ್ನದ ರಥ ವಿಚಾರದಲ್ಲಿ ನನ್ನ ಮೇಲೆ ಲೋಕಾಯುಕ್ತ ತನಿಖೆಗೆ ಬರೆದರು. ಆದರೆ ಪ್ರಾಮಾಣಿಕನಾದ ನನಗೆ ಇದರಿಂದ ಬೇಸರವಾಗಿ ಏಳು ವರ್ಷ ಸನ್ನಿಧಿಗೆ ಬಂದಿರಲಿಲ್ಲ. ತದನಂತರ ಬಿ.ಎಸ್. ಯಡಿಯೂರಪ್ಪ ಕ್ಷೇತ್ರಕ್ಕೆ ಬಂದಾಗ ತಾಯಿ ದರ್ಶನ ಪಡೆದು ಕಣ್ಣಿರು ಹಾಕಿದೆ ಎಂದು ತನಗೆ ಕ್ಷೇತ್ರದ ಬಗೆಗಿನ ನಂಬಿಕೆ ಮತ್ತು ಬಾಂಧವ್ಯದ ಬಗ್ಗೆ ಮೆಲುಕು ಹಾಕಿದರು.

ರಾಜ್ಯದಲ್ಲಿ ಮೊದಲ ಬಾರಿ ಬಿಸಿಯೂಟ ಪ್ರಾರಂಭಿಸಿದ ಕೀರ್ತಿ ಕೊಲ್ಲೂರು ದೇಗುಲಕ್ಕೆ ಇದೆ. ದೇವಸ್ಥಾನದಲ್ಲಿ ಲಂಚ ಹಾಗೂ ಭಕ್ತರಿಂದ ದುಡ್ಡು ವಸೂಲು ಮಾಡುವುದನ್ನು ನಾನು ವಯಕ್ತಿಕವಾಗಿ ವಿರೋಧಿಸುತ್ತೇನೆ. ಪುಣ್ಯ ನದಿ ಸೌಪರ್ಣಿಕೆಯ ಗಬ್ಬು ವಾಸನೆಗೆ ಶಾಶ್ವತ ಕಾಯಕಲ್ಪವಾಗಬೇಕು. ಇಲ್ಲಿನ ಸಿಬ್ಬಂದಿಗಳು ದೇವರ ಇಚ್ಚೆಗೆ ವಿರುದ್ದವಾಗಿ 2ನೇ ನಂಬರ್‌ ದಂಧೆಗೆ ಇಳಿದಲ್ಲಿ ದೇವಿಯ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.

(ವರದಿ- ಯೋಗೀಶ್ ಕುಂಭಾಸಿ

Comments are closed.