ಕರಾವಳಿ

ಕುಂದಾಪುರ ಮಿನಿವಿಧಾನಸೌಧ ಕಳಪೆ ತನಿಖೆ: 10ದಿನದೊಳಗೆ ಮರಳುಗಾರಿಕೆ: ಸಚಿವ ಕೋಟ (Video)

Pinterest LinkedIn Tumblr

ಕುಂದಾಪುರ: ಕುಂದಾಪುರ ಮಿನಿವಿಧಾನ ಸೌಧದಲ್ಲಿ ಎರಡು ಬಾರಿ ನಡೆದ ಅನಾಹುತಗಳ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದು ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದು ಮುಂದಿನ ಕ್ರಮ ಸರಕಾರ ಕೈಗೊಳ್ಳಲಿದೆ ಎಂದು ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಗುರುವಾರ ರಾತ್ರಿ ಕೋಟಕ್ಕೆ ಬಂದ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದರು.

ಆ.೧ರಿಂದ ಮರಳುಗಾರಿಕೆ ನಡೆಸುವ ಬಗ್ಗೆ ಸಿಎಂ ಸೂಚಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆ ನಡೆಸಿ ಹತ್ತು ದಿನಗಳೊಳಗಾಗಿ ಮರಳುಗಾರಿಕೆ ನಡೆಸಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇನ್ನು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಈ ಹಿಂದಿನಿಂದಲೂ ನನ್ನ ಹೋರಾಟವಿದೆ. ಪುನಶ್ಚೇತನಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಸಹಯೋಗದಲ್ಲಿ ಆಗಬೇಕು. ಈ ಬಗ್ಗೆ ರೈತ ಮುಖಂಡರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಲಾಗುವುದು ಎಂದರು.

ಇನ್ನು ಮೀನುಗಾರರ ಜ್ವಲಂತ ಸಮಸ್ಯೆಗಳಾದ ಡಿಸೇಲ್, ನಾಡಾ ದೋಣಿ ಮೀನುಗಾರರ ಸೀಮೆ ಎಣ್ಣೆ ಸಬ್ಸಿಡಿ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸುವರ್ಣ ತ್ರಿಭುಜ ಬೋಟ್ ಸದ್ಯ ಪತ್ತೆಯಾಗಿದ್ದು ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಬೇಕೆಂಬ ಅಭಿಪ್ರಾಯವಿದ್ದು ಗರಿಷ್ಟ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಕೂಡ ಆಶ್ವಾಸನೆ ನೀಡಿದ್ದಾರೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.